ನವದೆಹಲಿ: ಅಜ್ಜಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಹೇರಿದ್ದು ಒಂದು ತಪ್ಪು ನಿರ್ಧಾರವಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು. ಅಜ್ಜಿ ತಪ್ಪು ಮಾಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.
ಅದು ಸಂಪೂರ್ಣ ತಪ್ಪು. ನನ್ನ ಅಜ್ಜಿ ಅಂದು ಮಾಡಿದ್ದು ಪ್ರಮಾದವಾಗಿತ್ತು. ಆದರೆ ಕಾಂಗ್ರೆಸ್ ಭಾರತದ ಸಾಂಸ್ಥಿಕ ಚೌಕಟ್ಟನ್ನು ಬುಡಮೇಲು ಮಾಡಲು ಪ್ರಯತ್ನಿಸಲಿಲ್ಲ. ನಿಜ ಹೇಳಬೇಕೆಂದರೆ ಅದಕ್ಕೆ ಆ ಸಾಮರ್ಥ್ಯವೂ ಇರಲಿಲ್ಲ. ನಮ್ಮ ಪಕ್ಷ ಅದಕ್ಕೆ ಅವಕಾಶವೂ ಕೊಡಲ್ಲ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.
1975 ರಿಂದ 77 ರವರೆಗೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ವೇಳೆ ಹಲವು ಜನನಾಯಕರು ಜೈಲು ವಾಸ ಅನುಭವಿಸಿದ್ದರು. ಈಗಲೂ ಬಿಜೆಪಿ ಇದೇ ವಿಚಾರವಾಗಿ ಕಾಂಗ್ರೆಸ್ ನ್ನು ಆಗಾಗ ಕುಟುಕುತ್ತಲೇ ಇರುತ್ತದೆ.