ನವದೆಹಲಿ: ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಮಣಿಸಲು ಕೌರವರು ಚಕ್ರವ್ಯೂಹ ನಿರ್ಮಿಸಿದ ಹಾಗೆ ಈಗ ಬಿಜೆಪಿಯೂ ಯುವಕರ ಸುತ್ತ ಚಕ್ರವ್ಯೂಹ ಹಣಿಯುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕುರುಕ್ಷೇತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಅಭಿಮನ್ಯುವನ್ನು ಮಣಿಸಲು ಚಕ್ರವ್ಯೂಹವನ್ನು ಹಣೆಯಲಾಗಿತ್ತಂತೆ. ನಾನು ಓದಿದ ಹಾಗೆ ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯುತ್ತಾರೆ. ಪದ್ಮ ಎಂದರೆ ಕಮಲ. ಚಕ್ರವ್ಯೂಹವೂ ಕಮಲದಂತೆ ಇತ್ತಂತೆ. ಈಗ ಬಿಜೆಪಿಯೂ ಅದನ್ನೇ ಮಾಡುತ್ತಿದೆ.
21 ನೇ ಶತಮಾನದಲ್ಲಿ ಪ್ರಧಾನಿ ಮೋದಿ ತಮ್ಮ ಎದೆಯಲ್ಲೇ ಕಮಲದ ಚಿತ್ರ ಅಂಟಿಸಿಕೊಂಡಿದ್ದಾರೆ. ಹಿಂದೆ ಅಭಿಮನ್ಯುವಿಗೆ ಮಾಡಿದ್ದನ್ನೇ ಈಗಿನ ಬಿಜೆಪಿ ಸರ್ಕಾರ ಯುವಕರು, ಮಹಿಳೆಯರು, ಕೃಷಿಕರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವರ್ಗದವರೊಡನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಚಕ್ರವ್ಯೂಹವನ್ನು ಆರು ಜನ ನಿಯಂತ್ರಿಸುತ್ತಿದ್ದಾರೆ. ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ನಿಭಾಯಿಸುತ್ತಿದ್ದಾರೆ. ರಾಹುಲ್ ಅಂಬಾನಿ, ಅದಾನಿ ಹೆಸರು ಪ್ರಸ್ತಾಪಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಆಕ್ಷೇಪವೆತ್ತಿದರು. ಆಗ ರಾಹುಲ್, ಬೇಕಿದ್ದರೆ ನಾನು ಅಂಬಾನಿ ಮತ್ತು ಅದಾನಿ ಹೆಸರನ್ನು ಹಿಂತೆಗೆಯುತ್ತೇನೆ ಎಂದರು.