ಭೋಪಾಲ್:ಮಧ್ಯಪ್ರದೇಶದ ಮಂಡಸೌರ್ ನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ನಡೆಸಿದ ಗೋಲಿಬಾರ್ ಐವರು ರೈತರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಪೀಡಿತ ಮಂಡಸೌರ್ ಗೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಮಧ್ಯಪ್ರದೇಶ ಪೊಲೀಸರು ನೀಮುಚ್ ನಲ್ಲಿ ಬಂಧಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದಿರುವುದಾಗಿ ತಿಳಿದುಬಂದಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ರಾಜ್ಯದಲ್ಲಿ ರೈತರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ. ನಾನು ಆ ಪ್ರದೇಶಕ್ಕೆ ಹೋಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತರ 1. 5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಜಸ್ಥಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಪೈಲಟ್, ಕಾಂಗ್ರೆಸ್ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್, ಕಮಲ್ ನಾಥ್ ಸಿಂಗ್ ಹಾಗೂ ಶರದ್ ಯಾದವ್ ಅವರನ್ನೂ ಕೂಡಾ ಪೊಲೀಸರು ನೀಮುಚ್ ನಲ್ಲಿ ತಡೆದು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.