ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಮೋದಿ ತಮ್ಮ ಜಾತಿ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ.
ಒಡಿಶ್ಶಾದಲ್ಲಿ ಭಾರತ್ ನ್ಯಾಯ್ ಜೋಡೋ ಯಾತ್ರೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಒಬಿಸಿ ಸಮುದಾಯದವರು ಎಂದು ದೇಶದ ಜನತೆಗೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಆರೋಪವೇನು? ಪ್ರಧಾನಿ ಮೋದಿ ನಿಜವಾಗಿ ಸಾಮಾನ್ಯ ವರ್ಗಕ್ಕೆ ಸೇರಿದವರು. ಆದರೆ ಅವರು ತಾನು ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ಸುಳ್ಳು ಹೇಳಿದ್ದಾರೆ. ದೇಶದ ಜನತೆಯಿಂದ ತಮ್ಮ ಜಾತಿ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಅವರು ಗುಜರಾತ್ ನ ತೆಲಿ ಜಾತಿಯಲ್ಲಿ ಹುಟ್ಟಿದವರು. ಈ ಸಮುದಾಯಕ್ಕೆ 2000 ರಲ್ಲಿ ಬಿಜೆಪಿ ಒಬಿಸಿ ಸ್ಥಾನ ಮಾನ ನೀಡಿತ್ತು. ಹುಟ್ಟಿನಿಂದ ಅವರು ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಬಿಜೆಪಿಯವರು ಪ್ರತೀ ಬಾರಿ ಜನರ ಎದುರು ಪ್ರಧಾನಿ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಹಿಂದುಳಿದ ವರ್ಗಕ್ಕೆ ಸೇರಿದವರು ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿಕೊಳ್ಳುತ್ತದೆ. ಆದರೆ ಇದು ಜನರನ್ನು ತಪ್ಪು ದಾರಿಗೆಳೆಯುವ ಯತ್ನವಾಗಿದೆ. ಇದನ್ನು ಪ್ರತೀ ಬಿಜೆಪಿ ಕಾರ್ಯಕರ್ತನಿಗೂ ಹೇಳಿ ಎಂದು ರಾಹುಲ್ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ಮೋದಿ ಸಂಸತ್ತಿನಲ್ಲಿ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದರು. ಯುವರಾಜನನ್ನು ಲಿಫ್ಟ್ ಮಾಡಲು ಏನೆಲ್ಲಾ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ರಾಹುಲ್ ತಿರುಗೇಟು ನೀಡಿದ್ದಾರೆ.