ನವದೆಹಲಿ: ಬ್ಯುಸಿ ರಾಜಕಾರಣದ ಮಧ್ಯೆಯೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸ ಬಿಜೆಪಿಗೆ ಟೀಕೆಯ ವಸ್ತುವಾಗಿದೆ.
‘ನನ್ನ ಅಜ್ಜಿ ಮತ್ತು ಕುಟುಂಬದವರನ್ನು ಭೇಟಿಯಾಗಲು ವಿದೇಶಕ್ಕೆ ತೆರಳುತ್ತಿದ್ದೇನೆ. ಅವರನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕ ಕೈಲಾಶ್ ವಿಜಯ್ ವಾಗ್ರಿಯಾ ವ್ಯಂಗ್ಯವಾಡಿದ್ದಾರೆ.
‘ಚಿಕ್ಕವರಿದ್ದಾಗ ನಾವೂ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದೆವು. ಮಕ್ಕಳು ಈಗಲೂ ಅಜ್ಜಿ ಮನೆಗೆ ಹೋಗುತ್ತಾರೆ’ ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಾಯಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದ ರಾಹುಲ್ ಗಾಂಧಿ ಇದೀಗ ಮತ್ತೆ ವಿದೇಶಕ್ಕೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಆದರೆ ಅವರು ಯಾವಾಗ ಮರಳುತ್ತಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಹಿಂದೊಮ್ಮೆ ಇದೇ ರೀತಿ ಸುಮಾರು ಒಂದೂವರೆ ತಿಂಗಳ ಕಾಲ ಅಜ್ಞಾತ ಸ್ಥಳಕ್ಕೆ ರಾಹುಲ್ ತೆರಳಿದ್ದರು. ಹೀಗಾಗಿ ಬಿಜೆಪಿ ಇದನ್ನೇ ಒಂದು ಟೀಕಾಸ್ತ್ರವಾಗಿಸಿದೆ.
ಆದರೆ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುಜ್ರೇವಾಲಾ ಬಿಜೆಪಿ ಕಾಮೆಂಟ್ ಗೆ ಪ್ರತಿಕ್ರಿಯಿಸಿದ್ದು, ‘ರಾಹುಲ್ ಅಜ್ಜಿಗೆ 90 ವರ್ಷವಾಗಿದೆ. ಹಿರಿಯರನ್ನು ನೋಡಿಕೊಳ್ಳಬೇಕಾದ್ದು ನಮ್ಮ ಧರ್ಮ’ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ರಾಷ್ಟ್ರಪತಿ ಚುನಾವಣೆಯಂತಹ ಮಹತ್ವದ ರಾಜಕೀಯ ವಿದ್ಯಮಾನದ ಸಂದರ್ಭದಲ್ಲಿ ರಾಹುಲ್ ವಿದೇಶ ಭೇಟಿ ಅಚ್ಚರಿಗೆ ಕಾರಣವಾಗಿದೆ.