ನವದೆಹಲಿ : ಜ್ಞಾನವಾಪಿ ಸರ್ವೇ ವಿವಾದವೇ ಮುಗಿದಿಲ್ಲ. ಇದರ ನಡುವೆ ಮತ್ತೊಂದು ವಿವಾದ ತೆರೆ ಮೇಲೆ ಬಂದಿದೆ.
ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕುತುಬ್ ಮಿನಾರ್ ಬಳಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಸದ್ದಿಲ್ಲದೇ ಸಮೀಕ್ಷೆ ಮುಗಿಸಿದೆ. ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಇಲ್ಲ ಇದೆಲ್ಲಾ ಸುಳ್ಳು ಎಂದು ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದರು.
ಯಾವುದೇ ಸರ್ವೇಗೆ ಆದೇಶ ನೀಡಿಲ್ಲ ಎಂದು ಹೇಳಿದ್ದರು. ಆದರೆ ಕವ್ವಾತುಲ್ ಇಸ್ಲಾಂ ಮಸೀದಿ ಆವರಣದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ತರುಣ್ ವಿಜಯ್ ನೇತೃತ್ವದ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಪ್ರಾಧಿಕಾರ(ಎನ್ಎಂಎ) ಸಮೀಕ್ಷೆ ಜೊತೆಗೆ ಪ್ರತಿಮಾಶಾಸ್ತ್ರ(ಐಕಾನೋಗ್ರಫಿ)ವನ್ನು ಕೈಗೊಂಡಿದೆ.
ಈ ವೇಳೆ 27 ಹಿಂದೂ ಮತ್ತು ಜೈನ ಮಂದಿರಗಳ ಅವಶೇಷಗಳನ್ನು ಬಳಸಿ ಇಲ್ಲಿ ದೊಡ್ಡಮಟ್ಟದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿರೋದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಎನ್ಎಂಎ ಈಗಾಗಲೇ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕಳಿಸಿಕೊಟ್ಟಿದೆ ಎನ್ನಲಾಗಿದೆ.