ನನ್ನ ಮಗ ಸಂದೀಪ್ ಕುಮಾರ್ ಶರ್ಮಾ ಲಷ್ಕರ್-ಎ-ತೊಯಿಬಾ ಸಂಘಟನೆ ಉಗ್ರನಾಗಿದ್ದರೆ ಆತನನ್ನು ಶಿಕ್ಷಿಸಿ ಬಿಡಬೇಡಿ ಎಂದು ಜಮ್ಮು ಕಾಶ್ಮಿರದಲ್ಲಿ ಬಂಧಿತನಾಗಿರುವ ಸಂದೀಪ್ ತಾಯಿ ಹೇಳಿದ್ದಾರೆ.
ಬಂಧಿತ ಉಗ್ರ ಶರ್ಮಾನ ಬಗ್ಗೆ ಮಾಹಿತಿ ಪಡೆಯಲು ಭಯೋತ್ಪಾದನಾ ನಿಗ್ರಹ ದಳ ಆತನ ತಾಯಿ ಪಾರ್ವತಿ ಮತ್ತು ಸಹೋದರಿ ರೇಖಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ನಂತರ ತಡರಾತ್ರಿ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನನ್ನ ಪುತ್ರ ಉಗ್ರನಾಗಿದ್ದರೆ ಆತನಿಗೆ ಶಿಕ್ಷೆಯೇ ಸೂಕ್ತ. ಆತನ ಕೃತ್ಯಗಳಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದಲ್ಲದೇ ನಮ್ಮ ಕುಟುಂಬ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಪಾರ್ವತಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ 2012ರಲ್ಲಿ ಲಕ್ನೋ ನಗರವನ್ನು ತೊರೆದಿದ್ದ ಸಂದೀಪ್ ಅಲಿಯಾಸ್ ಆದಿಲ್, ಜಮ್ಮುವಿನಲ್ಲಿ ಮಾಸಿಕ 12 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದೇನೆ ಎಂದು ತಾಯಿಗೆ ತಿಳಿಸಿದ್ದ. ಆತನ ತಂದೆ 2007ರಲ್ಲಿ ನಿಧನ ಹೊಂದಿದ್ದಾರೆ. ಸಹೋದರ ಹರಿದ್ವಾರದಲ್ಲಿ ಟ್ಯಾಕ್ಸಿ ಚಾಲಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರ ಸಂದೀಪ್ ಶರ್ಮಾ ನಿವಾಸದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು,ಕುಟುಂಬದ ಸದಸ್ಯರ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.