ಮಾನನಷ್ಟ ಮೊಕದ್ದಮೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಖಾರವಾಗಿ ಉತ್ತರಿಸಿದೆ.
ಸರಕಾರದ ನೀತಿಗಳನ್ನು ವಿರೋಧಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ನಾಗಪ್ಪನ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಡಿಎಂಡಿಕೆ ಮುಖಂಡ ವಿಜಯ್ ಕಾಂತ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ ಅಪೆಕ್ಸ್ ಕೋರ್ಟ್, ತಮಿಳಪನಾಡು ಸರಕಾರದಂತೆ ಬೇರೆ ಯಾವುದೇ ರಾಜ್ಯ ಸರಕಾರಿ ಅಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಮುಖ್ಯಮಂತ್ರಿ ಆರೋಗ್ಯದ ಸ್ಥಿತಿ ಕುರಿತಂತೆ ನೀಡಿದ ಹೇಳಿಕೆಗೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಮುಖ್ಯಮಂತ್ರಿ ಜಯಲಲಿತಾ ಮತ್ತು ಅವರ ಸರಕಾರದ ನೀತಿಗಳನ್ನು ಪ್ರಶ್ನಿಸಿರುವುದಕ್ಕೆ ತಮ್ಮ ವಿರುದ್ಧ ತಮಿಳುನಾಡು ಸರಕಾರ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ವಿರೋಧಿಸಿ ವಿಜಯ್ ಕಾಂತ್ ದೂರು ಸಲ್ಲಿಸಿದ್ದರು.
ತಮಿಳುನಾಡು ಸರಕಾರ ಮತ್ತು ಸರಕಾರದ ನೀತಿಗಳನ್ನು ಟೀಕಿಸಿದವರ ವಿರುದ್ಧ 131 ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎನ್ನುವ ಮಾಹಿತಿ ಪಡೆದ ಸುಪ್ರೀಂಕೋರ್ಟ್ ಜಯಲಲಿತಾ ವಿರುದ್ಧ ಕಠಿಣ ಶಬ್ದಗಳನ್ನು ಬಳಸಿತು.
ಸರಕಾರದ ನೀತಿಗಳನ್ನು ಪ್ರಶ್ನಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದು ಪೂರಕವಲ್ಲ. ಮಾನನಷ್ಟ ಮೊಕದ್ದಮೆ ಅಸ್ತ್ರವಲ್ಲ. ಇದನ್ನು ಪ್ರಜಾಪ್ರಭುತ್ವದ ಕತ್ತು ಕತ್ತರಿಸಲು ಬಳಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ