ಪ್ರಧಾನಮಂತ್ರಿ ನರೇಂದ್ರ ಮೋದಿ ಶೈಕ್ಷಣಿಕ ಅರ್ಹತೆಯ ಬಗ್ಗೆ ವಿವರಗಳನ್ನು ನೀಡುವಂತೆ ಕೇಂದ್ರ ವಾರ್ತಾ ಆಯೋಗ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೆಂದ್ರ ವಾರ್ತಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ದೇಶದ ಜನತೆ ಪ್ರಧಾನಿ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ತಿಳಿಯಲು ಉತ್ಸಕರಾಗಿದ್ದು, ಮಾಹಿತಿ ನೀಡುವಂತೆ ಕೋರಿದ್ದರು.
ವಾರ್ತಾ ಆಯುಕ್ತ ಶ್ರೀಧರ್ ಆಚಾರ್ಯಲು, ಪ್ರಧಾನಮಂತ್ರಿ ಮೋದಿ ಪದವಿ ಪಡೆದ ವರ್ಷ ಮತ್ತು ನೋಂದಣಿ ಸಂಖ್ಯೆಯನ್ನು ನೀಡುವಂತೆ ಪ್ರಧಾನಮಂತ್ರಿ ಕಚೇರಿಗೆ ನಿರ್ದೇಶನ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು ನೋಂದಾಯಿಸದಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಪ್ರಧಾನಮಂತ್ರಿಯಂತಹ ಹುದ್ದೆಯಲ್ಲಿರುವ ವ್ಯಕ್ತಿ ತನ್ನ ಶೈಕ್ಷಣಿಕ ಅರ್ಹತೆಯನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ ಎಂದು ಆಚಾರ್ಯಲು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ವಾರ್ತಾ ಆಯುಕ್ತರು ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಂತೆ ಪರಿಗಣಿಸಿರುವುದು ಕಾನೂನುಬಾಹಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ನರೇಂದ್ರ ದಾಮೋದರ್ ಮೋದಿ ಹೆಸರಿನಲ್ಲಿ 1978ರಲ್ಲಿ ದೆಹಲಿ ವಿಶ್ವವಿದ್ಯಾಲಯ ಮತ್ತು 1983ರಲ್ಲಿ ಮಾಸ್ಟರ್ ಪದವಿ ಪಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ನೀಡುವಂತೆ ವಾರ್ತಾ ಆಯುಕ್ತ ಶ್ರೀಧರ್ ಆಚಾರ್ಯಲು ನಿರ್ದೇಶನ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.