ಮೈಸೂರು : ಐಟಿ ದಾಳಿಯಲ್ಲಿ ರಾಜಕೀಯವಿದೆ ಎಂಬುದು ನನ್ನ ಅನುಮಾನ. ಬಿ.ಎಸ್.ಯಡಿಯೂರಪ್ಪ ವಿಜಯೇಂದ್ರ ಆಪ್ತರನ್ನೇ ಆಯ್ಕೆ ಮಾಡಿಕೊಂಡು ದಾಳಿ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನನಗಂತು ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿಯೆಂದು ಹೇಳುವುದಿಲ್ಲ. ಹಾಗೇ ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ ಈ ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತದೆ. ಜನ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ ಎಂದರು.
ಜೆಡಿಎಸ್ ನವರು ಒಳ್ಳೆಯ ಉದ್ದೇಶದಿಂದಂತೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವುದೇ ಅವರ ಉದ್ದೇಶ. ಆದರೆ ಜನ ಬುದ್ದಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದರು.
ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹ. ಸೋನಿಯಾ ಗಾಂಧಿಯವರೂ ಕರೆದಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಸುಮ್ಮನೆ ಊಹಾಪೋಹದ ಚರ್ಚೆಗಳು ಬೇಡ. ನಾನು ಎಂದೂ ಆ ಯೋಚನೆ ಮಾಡಿಯೂ ಇಲ್ಲ. ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು