ಕಳೆದ ತಿಂಗಳು ನಡೆದಿದ್ದ ನಿವೃತ್ತ ಅರಣ್ಯಾಧಿಕಾರಿ ಕೆ.ಸಿ. ಚಂಗಪ್ಪ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಂದ ಬರೊಬ್ಬರಿ 48 ಲಕ್ಷ ರೂಪಾಯಿಗಳನ್ನು ಹಾಸನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಬಂಧಿತರಲ್ಲಿ ಇಬ್ಬರು ಕರವೇ ಉಪಾಧ್ಯಕ್ಯರಾಗಿದ್ದಾರೆ.
ಕರವೇ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅಟ್ಟಾವರ ಹೊಸಳ್ಳಿ ಗ್ರಾಮದ ನಿವಾಸಿ ವಿಶ್ವಾಸ್ (26), ಕರವೇ ತಾಲೂಕು ಉಪಾಧ್ಯಕ್ಷ ನಗರದ ಕೆ.ಆರ್. ಪುರಂ ನಿವಾಸಿ ಮೋಹನ್ (28) ಮತ್ತು ತಾಲೂಕಿನ ಅಟ್ಟಾವರ ಹೊಸಳ್ಳಿ ಗ್ರಾಮದ ನಿವಾಸಿ ವಸಂತ್ (35) ಬಂಧಿತ ಆರೋಪಿಗಳಾಗಿದ್ದಾರೆ.
ಚಂಗಪ್ಪ ಅವರ ಸ್ನೇಹಿತನ ಮಗನಿಗೆ ಮೆಡಿಕಲ್ ಸೀಟ್ ಕೊಡಿಸುವ ನೆಪದಲ್ಲಿ ಸಂಚು ರೂಪಿಸಿದ್ದ ಈ ಮೂವರು ದುಷ್ಕರ್ಮಿಗಳು ಅವರನ್ನು ಹತ್ಯೆಗೈದಿದ್ದರು.
ಆಲೂಗಡ್ಡೆ ವ್ಯಾಪಾರಿಯೊಬ್ಬರ ಮಗನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ಮೂವರು ಹೇಳಿದ್ದ ಮಾತನ್ನು ನಂಬಿದ್ದ ಅರಣ್ಯಾಧಿಕಾರಿ ಕಳೆದ ತಿಂಗಳು 20 ರಂದು 50 ಲಕ್ಷ ರೂ.ಗಳ ಜೊತೆ ಈ ಮೂವರ ಜತೆ ಕಾರಿನಲ್ಲಿ ಹೋಗಿದ್ದರು. ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು ಮಾರ್ಗ ಮಧ್ಯೆ ಚಂಗಪ್ಪ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಶವವನ್ನು ಆಲೂರು ಬಳಿ ಹೇಮಾವತಿ ನದಿಯ ಹಿನ್ನೀರಿನಲ್ಲಿ ಕಲ್ಲುಕಟ್ಟಿ ಬಿಸಾಡಿದ್ದರು.
ತಂದೆ ಮನೆಗೆ ಬಾರದ ಹಿನ್ನೆಲೆ ಕೆ.ಸಿ. ಚಂಗಪ್ಪ ಪುತ್ರ ಮನೋಜ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಕೊನೆಗೂ ಕೊಲೆ ರಹಸ್ಯ ಬಯಲಾಗಿದ್ದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.