ನವದೆಹಲಿ: ಇಂದು ಗಾಂಧಿ ಜಯಂತಿ ನಿಮಿತ್ತ ಪ್ರಧಾನಿ ಮೋದಿ ಮಕ್ಕಳೊಂದಿಗೆ ಕಸ ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಈ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದರು.
ಮಹಾತ್ಮಾ ಗಾಂಧೀಜಿಯವರ ಪ್ರಮುಖ ತತ್ವಗಳಲ್ಲಿ ಸ್ವಚ್ಛತೆ ಕೂಡಾ ಒಂದಾಗಿತ್ತು. ಅವರ ಗೌರವಾರ್ಥ ಪ್ರಧಾನಿ ಮೋದಿ ಸ್ವಚ್ಛ ಭಾರತ್ ಅಭಿಯಾನ ಶುರು ಮಾಡಿದ್ದರು. ಈ ಅಭಿಯಾನ ಆರಂಭವಾಗಿ ಈಗ 10 ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಅವರು ಇಂದು ಸ್ವಚ್ಛತಾ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಿದರು.
ಗಾಂಧೀಜಿಯವರ ಜನ್ಮದಿನ ಪ್ರಯುಕ್ತ ನಾನಿಂದು ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದೆ. ನೀವೂ ನಿಮ್ಮ ಸಂಗಡಿಗರೊಂದಿಗೆ ಸೇರಿಕೊಂಡು ನಿಮ್ಮ ಪರಿಸರವನ್ನು ಸ್ವಚ್ಛಗೊಳಿಸಿ. ಇದರಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಹೆಚ್ಚಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಮೊದಲು ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಸಮಾಧಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು. ಮಕ್ಕಳೊಂದಿಗೆ ಸ್ವಚ್ಛತೆ ನಡೆಸಿದ ಬಳಿಕ ಅವರೊಂದಿಗೆ ಮಾತನಾಡಿ ಕ್ಷಣ ಕಾಲ ಕಳೆದರು. ಈ ಬಾರಿ ಸ್ವಚ್ಛ ಭಾರತ್ ಯೋಜನೆಗೆ 10 ವರ್ಷವಾಗಿರುವುದರಿಂದ ಗಾಂಧಿ ಜಯಂತಿ ಮತ್ತಷ್ಟು ವಿಶೇಷವಾಗಿದೆ.