ಪಂಚ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಮುಂಜಾನೆ ಸ್ವಿಜರ್ಲೆಂಡ್ ತಲುಪಿದ್ದಾರೆ. ಇಂದು ಅವರು ಸ್ವಿಜರ್ಲೆಂಡ್ ಅಧ್ಯಕ್ಷ ಜೊಹಾನ್ ಶ್ನೇಯ್ಡರ್ ಅಮಾನ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇಬ್ಬರು ನಾಯಕರ ನಡುವೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳು ಚರ್ಚೆಗೊಳಪಡುವ ಸಾಧ್ಯತೆಗಳಿವೆ. ಅಲ್ಲದೆ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಕೂಡಿಟ್ಟಿರುವ ಕಪ್ಪುಹಣದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಿಜರ್ಲೆಂಡ್ ನೇತಾರರೊಂದಿಗಿನ ಚರ್ಚೆಯ ವೇಳೆಯಲ್ಲಿ ಪ್ರಧಾನಿ 48 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವ ಪರಮಾಣು ಪೂರೈಕೆದಾರ ಗುಂಪಿಗೆ ಭಾರತದ ಸದಸ್ಯತ್ವ ಸೇರ್ಪಡೆಗೆ ಬೆಂಬಲ ಕೋರುವ ಸಾಧ್ಯತೆಗಳಿವೆ. ಸ್ವಿಜರ್ಲೆಂಡ್ ಎನ್‌ಎಸ್‌ಜಿ ಗುಂಪಿನ ಸದಸ್ಯ ರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.
ಈ ಸಂದರ್ಭದಲ್ಲಿ ಎರಡು ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆ ಸಹ ನಡೆಯಲಿದೆ ಎಂದು ತಿಳಿದು ಬಂದಿದೆ.
ಇಲ್ಲಿಂದ ಪ್ರಧಾನಿ ಅಮೆರಿಕದತ್ತ ಪ್ರಯಾಣ ಬೆಳೆಸಲಿದ್ದಾರೆ. ವಾಷಿಂಗ್ಟನ್‌ನಲ್ಲಿ ಅಮೇರಿಕಾದ ಅಧ್ಯಕ್ಷ ಒಬಾಮಾ ಭೇಟಿ ಸಂದರ್ಭದಲ್ಲಿ ಸಹ ಎನ್ಎಸ್‌ಜಿ ಸದಸ್ಯತ್ವದ ವಿಷಯ ಚರ್ಚೆಗೊಳಪಡುವ ಸಾಧ್ಯತೆಗಳಿವೆ. ಕಳೆದ ಮೇ 12 ರಂದು ಭಾರತ ಎನ್ಎಸ್‌ಜಿ ಸದಸ್ಯತ್ವಕ್ಕೆ ಔಪಚಾರಿಕ ಅರ್ಜಿ ಸಲ್ಲಿಸಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.