ನೋಟ್ ಬ್ಯಾನ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟೆಲಿವಿಜನ್‌ನಲ್ಲಿ, ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಸಮಯವಿದೆ. ಆದರೆ ,ಸಂಸತ್ತಿನಲ್ಲಿ ಮಾತನಾಡಲು ಸಮಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಗೆ ಟೆಲಿವಿಜನ್‌ನಲ್ಲಿ ಮಾತನಾಡಲು ಸಮಯವಿದೆ. ಆದರೆ, ದೇಶದ ಸಾಮಾನ್ಯ ಜನತೆ ನೋಟ್ ಬ್ಯಾನ್‌ನಿಂದ ತತ್ತರಿಸಿ ಹೋಗಿದ್ದರೂ ನವದೆಹಲಿಯಲ್ಲಿಯೇ ಇರುವ ಮೋದಿಗೆ ಸಂಸತ್ತಿಗೆ ಆಗಮಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 8 ರಂದು ಮೋದಿ, 500 ಮತ್ತು 1000 ರೂ, ನೋಟುಗಳಿಗೆ ನಿಷೇಧ ಹೇರಿದಾಗ, ಕೋಟ್ಯಾಂತರ ಜನತೆ ತೊಂದರೆಗೊಳಗಾಗಿದ್ದಾರೆ. ಇವತ್ತಿಗೂ ಎಟಿಎಂಗಳ ಬಳಿ ಜನರು ಸಾಲುಗಟ್ಟಿ ನಿಂತಿದ್ದಾರೆ.ಆದರೆ, ಸರಕಾರಕ್ಕೆ ಜನತೆಯ ಕಷ್ಟ ನಿವಾರಿಸುವ ಯಾವುದೇ ಉದ್ದೇಶವಿಲ್ಲ ಎಂದು ಕಿಡಿಕಾರಿದರು.
ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವಂತಹ ಮಹತ್ವದ ನಿರ್ಣಯವನ್ನು ಮೋದಿ, ಕೇವಲ 3-4 ಜನರ ಮುಂದೆ ಚರ್ಚೆ ನಡೆಸಿ ತೆಗೆದುಕೊಂಡಿರುವುದು ವಿಷಾದದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
500 ಮತ್ತು 1000 ರೂ. ನೋಟುಗಳ ನಿಷೇಧದಿಂದ ದೇಶದ ಶೇ.86 ರಷ್ಟು ನಗದು ಹಣ ಕಾಣೆಯಾಗಿದೆ. ಸಾಮಾನ್ಯ ಜನರು ಹಣಕಾಸಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ