ದೇಶ ಇಂದು ಮಹಾನ್ ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 120ನೇ ಜನ್ಮದಿನವನ್ನಾಚರಿಸುತ್ತಿದ್ದು, ಧೀಮಂತ ನಾಯಕನಿಗೆ ಪ್ರಧಾನಿ ಮೋದಿ ಅವರು ಗೌರವ ಸಮರ್ಪಿಸಿದ್ದಾರೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನವಾದ ಇಂದು ಅವರಿಗೆ ಗೌರವವಂದನೆ ಸಲ್ಲಿಸುತ್ತೇನೆ. ವಸಾಹತುಶಾಹಿಗಳಿಂದ ದೇಶವನ್ನು ಮುಕ್ತಗೊಳಿಸಲು ನೇತಾಜಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಮಹಾನ್ ಬೌದ್ಧಿಕ ಶಕ್ತಿಯನ್ನು ಹೊಂದಿದ್ದ ಅವರು ಸದಾ ಕೆಳಸ್ತರದ ಜನರ ಹಿತಾಸಕ್ತಿಗಳ ಬಗ್ಗೆ ಯೋಜಿಸುತ್ತಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅನೇಕ ದಶಕಗಳಿಂದ ಬೇಡಿಕೆಯಲ್ಲಿರುವ ನೇತಾಜಿಯವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಬಹಿರಂಗಪಡಿಸಲು ತಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿರುವುದು ಹೆಮ್ಮೆ ಎಂದ ಅವರು, ನೇತಾಜಿಯವರಿಗೆ ಸಂಬಂಧಪಟ್ಟ ದಾಖಲೆಗಳು http://www.netajipapers.gov.in ನಲ್ಲಿ ಲಭ್ಯವಾಗುತ್ತದೆ, ಎಂದಿದ್ದಾರೆ.
ನೇತಾಜಿ ನೆನಪಿನಲ್ಲಿ ಇಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅವರು ಒಡಿಶಾದ ಕಟಕ್‌ನಲ್ಲಿ 1897 ಜನವರಿ 23ರಂದು ಜನಿಸಿದ್ದರು.
ಏತನ್ಮಧ್ಯೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಕೂಡ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಟ್ಟಾ ರಾಷ್ಟ್ರೀಯವಾದಿ, ಮಹಾನ್ ದೇಶಭಕ್ತ ನೇತಾಜಿ ಎಂದು ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.