ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವಿನೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರುತ್ತಿರುವ ಪ್ರಧಾನಿ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಮೋದಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಈ ಸಮಾರಂಭಕ್ಕೆ ದೇಶ, ವಿದೇಶದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಫ್ಘಾನಿಸ್ತಾನ ಅಧ್ಯಕ್ಷ ಅಬ್ದುಲ್ ಹಮೀದ್, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ, ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮಿಂಟ್, ಭೂತಾನ್ ಪ್ರಧಾನಿ ಲೋಟೆ ಶೆರಿಂಗ್, ಥಾಯ್ಲೆಂಡ್ ವಿಶೇಷ ರಾಯಭಾರಿ ಗ್ರಿಸಾಡಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್, ಕಿರ್ಗಿಸ್ತಾನ ಅಧ್ಯಕ್ಷ ಸೂರನ್ ಬೇ ಜೀನ್ ಬೆಕಾವೊ ಮತ್ತಿತರು ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ, ಕರ್ನಾಟಕ ಸಿಎಂ ಕುಮಾರಸ್ವಾಮಿ, ಆಂಧ್ರ ನಿಯೋಜಿತ ಸಿಎಂ ಜಗಮೋಹನ್ ರೆಡ್ಡಿ, ತೆಲಂಗಾಣ ಸಿಎಂ ಚಂದ್ರಶೇಖರ ರಾವ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತಮಿಳು ಸೂಪರ್ ಸ್ಟಾರ್ ಕಮ್ ರಾಜಕಾರಣಿಗಳಾದ ರಜನೀಕಾಂತ್, ಕಮಲ್ ಹಾಸನ್ ಮುಂತಾದ ಗಣ್ಯರೂ ಭಾಗಿಯಾಗಲಿದ್ದಾರೆ.