ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ಕುರಿತಂತೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ನಿರ್ಧಾರದಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇವಲ ಪ್ರಚಾರ ರಾಜಕೀಯ ಮಾಡುತ್ತಿದ್ದಾರೆ. ಕೇವಲ ರಾಜಕೀಯಕ್ಕಾಗಿ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಿದ ಮೊದಲ ಪ್ರದಾನಿ ಮೋದಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜಮ್ಮು ಕಾಶ್ಮಿರ ಹೊತ್ತಿ ಉರಿಯುತ್ತಿದ್ದಾಗಲೂ ಪ್ರಧಾನಿ ಮೋದಿ ತಮ್ಮ ಮೂಕಪ್ರೇಕ್ಷಕರಾಗಿದ್ದರು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆಗೆ ಸಾಮಾನ್ಯವಾಗಿ ಸೋನಿಯಾ ಗಾಂಧಿ ಅಧ್ಯಕ್ಷತೆಯನ್ನು ವಹಿಸುತ್ತಿದ್ದರು. ಆದರೆ, ಸೋನಿಯಾ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಇದಕ್ಕಿಂತ ಮೊದಲು ಮಾತನಾಡಿದ ರಾಹುಲ್, ನೋಟು ನಿಷೇಧದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ .ಯೋಚಿಸದೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಗುಡುಗಿದರು.
ಒಬ್ಬರ ಕೈಗೆ ಅಧಿಕಾರ ಕೊಡುವುದು ದೇಶಕ್ಕೆ ಅಪಾಯಕಾರಿ ಸಂಗತಿ. ಪ್ರಧಾನಿ ಮೋದಿ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.