ನವದೆಹಲಿ: ಜಮ್ಮು ಕಾಶ್ಮೀರ ಚುನಾವಣಾ ಸಮಾವೇಶದಲ್ಲಿ ಮಾತನಾಡುವಾಗ ವೇದಿಕೆಯಲ್ಲೇ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾವರಿಸಿಕೊಂಡು ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಸಾಯಲ್ಲ ಎಂದಿದ್ದರು. ಈಗ ಅದೇ ಮಲ್ಲಿಕಾರ್ಜುನ ಖರ್ಗೆಗೆ ಮೋದಿಯೇ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಿನ್ನೆ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಿದ್ದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದರು. ಆದರೆ ತಕ್ಷಣವೇ ಸಾವರಿಸಿಕೊಂಡು ಮಾತು ಮುಂದುವರಿಸಿದ ಮಲ್ಲಿಕಾರ್ಜುನ ಖರ್ಗೆ, ನಾನು ಇಷ್ಟು ಬೇಗ ಸಾಯಲ್ಲ, ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿಯೇ ಸಾಯುವುದು ಎಂದಿದ್ದರು.
ಅವರ ಈ ಹೇಳಿಕೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಿನ್ನೆ ರಾತ್ರಿ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಮೋದಿ ಕರೆ ಮಾಡಿದ್ದು, ಆರೋಗ್ಯ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯ ಏನೇ ಇರಬಹುದು, ಆದರೆ ವೈಯಕ್ತಿಕವಾಗಿ ಮೋದಿ ವಿಪಕ್ಷ ನಾಯಕನ ಆರೋಗ್ಯ ವಿಚಾರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ಬಿಜೆಪಿ ತೀವ್ರ ಟೀಕೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಅಮಿತ್ ಶಾ, ಮಲ್ಲಿಕಾರ್ಜುನ ಖರ್ಗೆ ಭಾಷಣದ ಬಗ್ಗೆ ಅವರ ಪಕ್ಷದವರಿಂದಲೇ ಟೀಕೆ ಬಂದಿದೆ. ಖರ್ಗೆ ತಮ್ಮ ಆರೋಗ್ಯ ವಿಚಾರದಲ್ಲಿ ಅನಗತ್ಯವಾಗಿ ಮೋದಿ ಜೀಯವರನ್ನು ಎಳೆದಿದ್ದಾರೆ. ಅವರು ಮೋದಿ ಮೇಲೆ ಎಷ್ಟು ಧ್ವೇಷವಿಟ್ಟುಕೊಂಡಿದ್ದಾರೆ ಎಂದು ಈ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಎಂದಿದ್ದಾರೆ.