ಅಹಮದಾಬಾದ್:ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯಲು ‘ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್’ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ನ 52ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ‘ಏಷಿಯಾ-ಆಫ್ರಿಕಾ ಅಭಿವೃದ್ಧಿ ಯೋಜನೆ’ಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಈ ಮೂಲಕ ‘ಒನ್ ಬೆಲ್ಟ್, ಒನ್ ರೋಡ್’ ಆರ್ಥಿಕ ಕಾರಿಡಾರ್ ರೂಪಿಸಲು ಹೊರತಿರುವ ಚೀನಾಗೆ ಸೆಡ್ಡುಹೊಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾನು ಜಪಾನ್ಗೆ ತೆರಳಿದ್ದ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶೀಂಜೋ ಅಬೆ ಅವರೊಂದಿಗೆ ಏಷ್ಯಾ ಮತ್ತು ಆಫ್ರಿಕಾ ನಡುವೆ ಅಭಿವೃದ್ಧಿ ಕಾರಿಡಾರ್ ರೂಪಿಸುವ ಮಹತ್ವದ ಕುರಿತು ಚರ್ಚೆ ನಡೆಸಿದ್ದೆ. ಭಾರತ ಮತ್ತು ಜಪಾನ್ ಸಂಶೋಧನಾ ಸಂಸ್ಥೆಗಳು ಈಗಾಗಲೇ ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ರೂಪಿಸುವ ಸಂಬಂಧ ವರದಿ ಸಿದ್ದಪಡಿಸಿದ್ದು, ಶೀಘ್ರ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಪ್ರಾರಂಭಿಸಲಾಗುವುದು ಎಂದಿದ್ದಾರೆ. ಅಲ್ಲದೇ ಆಫ್ರಿಕಾ ಜೊತೆಗಿನ ಭಾರತದ ಪಾಲುದಾರಿಕೆಯು ಆಫ್ರಿಕಾದ ಎಲ್ಲಾ ರಾಷ್ಟ್ರಗಳ ಬೇಡಿಕೆಗಳಿಗೆ ಸ್ಪಂದಿಸುವ ಒಂದು ಸಹಕಾರದ ಮಾದರಿಯನ್ನು ಆಧರಿಸಿದೆ ಎಂದು ಹೇಳಿದ್ದಾರೆ.