35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ವಿಫಲಗೊಂಡಿದ್ದರಿಂದ ಆಕ್ರೋಶಗೊಂಡ ದುರುಳರು ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ರಾಡ್ ಹಾಕಿ ಸಾವಿಗೆ ಕಾರಣವಾದ ಹೇಯ ಘಟನೆ ವರದಿಯಾಗಿದೆ.
22 ವರ್ಷದ ಯುವಕ ಸೇರಿದಂತೆ ಇಬ್ಬರು ದುಷ್ಟರು ಇಂತಹ ಹೃದಯ ವಿದ್ರಾವಕ ಘಟನೆ ಎಸಗಿದ್ದಾರೆ. ಇಬ್ಬರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರದಂದು ರಾತ್ರಿ ಇಬ್ಬರು ಆರೋಪಿಗಳು ನಾಲ್ಕು ಮಕ್ಕಳ ತಾಯಿಯಾದ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ತೀವ್ರವಾಗಿ ಪ್ರತಿಭಟಿಸಿದ್ದರಿಂದ, ಆಕ್ರೋಶದಿಂದ ಆಕೆಯ ಮೇಲೆ ಹಲ್ಲೆ ನಡೆಸಿ, ನಂತರ ಗುಪ್ತಾಂಗದಲ್ಲಿ ಕಬ್ಬಿಣ ರಾಡ್ ಹಾಕಿ ಕ್ರೂರತೆಯನ್ನು ಮೆರೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.