ನವದೆಹಲಿ : ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಕರಾಚಿಗೆ ತನ್ನ ಪಥ ಬದಲಿಸಿದ್ದು, ತುರ್ತು ಭೂಸ್ಪರ್ಶ ಮಾಡುವ ಮೊದಲೇ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ ದೆಹಲಿಯಿಂದ ಇಂಡಿಗೋ ಏರ್ ಲೈನ್ ಸಂಸ್ಥೆಯ 6ಇ-1736 ವಿಮಾನವು ಪ್ರಯಾಣ ಬೆಳೆಸಿದೆ. ವಿಮಾನ ಜರ್ನಿ ಆರಂಭವಾದ ಕೆಲ ಕ್ಷಣಗಳಲ್ಲಿ, ಪ್ರಯಾಣಿಕ ನೈಜೀರಿಯಾ ಮೂಲದ ಅಬ್ದುಲ್ಲಾ (60)ಗೆ ತೀವ್ರ ಅಸ್ವಸ್ಥತೆ ಕಾಡಿದೆ. ಈ ವೇಳೆ ವಿಮಾನವು ಪಾಕಿಸ್ತಾನದ ಕಡೆಯಿಂದ ಹಾದು ಹೋಗುತ್ತಿತ್ತು.
ವಿಚಾರದ ತಿಳಿದ ಕೂಡಲೇ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ ಪೈಲಟ್, ಅಬ್ದುಲ್ಲಾ ಅವರ ಪರಿಸ್ಥಿತಿಯನ್ನು ವಿವರಿಸಿ ತುರ್ತು ಭೂಸ್ಪರ್ಶನಕ್ಕಾಗಿ ಅನುಮತಿ ಕೋರಿದ್ದಾರೆ. ಇದನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮೋದಿಸಿ,
ತುರ್ತು ಭೂಸ್ಪರ್ಶ ಮಾಡಲು ಅನುಮತಿ ನೀಡಿದ್ದಾರೆ. ಇತ್ತ ಅದಾಗಲೇ ಅಬ್ದುಲ್ಲಾ ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಿಮಾನವನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸುವ ಮುನ್ನವೇ ಅಬ್ದುಲ್ಲಾ ಅಸುನೀಗಿದ್ದಾರೆ.