ಭಾರತ ಪರಮಾಣು ಅಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಸರಿಯಲ್ಲ ಎಂದು ಹೇಳುವುದರ ಮೂಲಕ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಅವರು, ನಾವಾಗಿಯೇ ಪರಮಾಣು ಅಸ್ತ್ರಗಳನ್ನು ಬಳಸಲು ಮುಂದಾಗುವುದಿಲ್ಲ ಎನ್ನುವುದು ಏತಕ್ಕೆ? ಹಾಗೆ ಹೇಳುವ ಬದಲು ಭಾರತ ಜವಾಬ್ದಾರಿಯುತ ಪರಮಾಣು ಶಕ್ತಿ ರಾಷ್ಟ್ರ ಎನ್ನಬೇಕಿದೆ. ನಾವು ಈ ಶಕ್ತಿಯನ್ನು ಎಂದು ಕೂಡ ಹೊಣೆಗೇಡಿತನದಿಂದ ಬಳಸುವುದಿಲ್ಲ ಎನ್ನಬೇಕು, ಇದು ನನ್ನ ಅಭಿಪ್ರಾಯ ಎಂದು ಪರಿಕ್ಕರ್ ಗುರುವಾರ ಹೇಳಿದ್ದಾರೆ.
ಇದು ನನ್ನ ಸಿದ್ಧಾಂತವಾಗಿದ್ದು, ಸರ್ಕಾರಕ್ಕೆ ಇದಕ್ಕೆ ಯಾವುದೇ ಸಂಬಂಧವಿಲ್ಲ. ಕೆಲವರು ಪರಿಕ್ಕರ್ ಪರಮಾಣು ಸಿದ್ಧಾಂತವನ್ನು ಬದಲಾಯಿಸಿದ್ದಾರೆಂದು ಹೇಳುತ್ತಾರೆ. ಅಂತವರಿಗೆ ನನ್ನ ಸ್ಪಷ್ಟ ಉತ್ತರವಿದು- ಪರಮಾಣು ಸಿದ್ಧಾಂತ ಯಾವುದೇ ಸರ್ಕಾರದ ನೀತಿಯಲ್ಲಿಯೂ ಬದಲಾಗಿಲ್ಲ .ಈಗಲೂ ಸಹ ಹಾಗೆ ಇದೆ ಎಂದಿದ್ದಾರೆ ಪರಿಕ್ಕರ್.
ಇದು ಸಚಿವರ ವೈಯಕ್ತಿಕ ಅಭಿಪ್ರಾಯ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಸಹ ಸ್ಪಷ್ಟೀಕರಣ ನೀಡಿದ್ದಾರೆ.
ಮೇ 1998ರಲ್ಲಿ ಪೋಕ್ರಾನ್‌ನಲ್ಲಿ 5 ಯಶಸ್ವಿ ಪರಮಾಣು ಪರೀಕ್ಷೆ ನಡೆಸಿದ್ದ ಭಾರತ ನಾವಾಗಿಯೇ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವುದಿಲ್ಲ ಎಂಬ ನಿಲುವನ್ನು ಪ್ರಕಟಿಸಿತ್ತು. ಭಾರತದ ಬೆನ್ನ ಹಿಂದೆಯೇ ಪಾಕಿಸ್ತಾನ ಕೂಡ ಯಶಸ್ವಿ ಪರೀಕ್ಷೆ ನಡೆಸಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಾಲಿಸಿಯನ್ನದು ಘೋಷಿಸಿಲ್ಲ. ಕೆಲ ದಿನಗಳ ಹಿಂದೆ ಸಹ ಪಾಕ್ ಅಧಿಕಾರಿಗಳು ಭಾರತದ ಮೇಲೆ ಪರಮಾಣು ಅಸ್ತ್ರ ಪ್ರಯೋಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದಿದ್ದರು.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಅಧಿಕಾರಿಗಳು ಭಾರತದ ಮೇಲೆ ಪರಮಾಣು ಅಸ್ತ್ರವನ್ನು ಬಳಸಲು ಪಾಕಿಸ್ತಾನ ಹಿಂಜರಿಯುವುದಿಲ್ಲ ಎಂದು ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ