ಪುಣೆಯ ಫಿಲಂ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ವಿವಾದಾತ್ಮಕ ಅಧ್ಯಕ್ಷರಾಗಿರುವ ನಟ ಗಜೇಂದ್ರ ಚೌಹಾಣ್ ಅವರ ಅಧಿಕಾರಾವಧಿ ಇಂದಿಗೆ ಕೊನೆಗೊಂಡಿದೆ.
ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಬಿಜೆಪಿ ನಾಯಕ, ಮಾಜಿ ನಟರಾಗಿರುವ ಚೌಹಾಣ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಅವರ ಮನವಿ ಪುರಸ್ಕರಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಅವರ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೂನ್ 2015ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ಆಯ್ಕೆ ಬಹುದೊಡ್ಡ ವಿವಾದವಾಗಿದ್ದರಿಂದ ಮತ್ತು ಅವರ ನೇಮಕಾತಿಯನ್ನು ವಿರೋಧಿಸಿ ಸತತ ನಾಲ್ಕು ತಿಂಗಳು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಅಧಿಕಾರ ಕೈಗೆತ್ತಿಕೊಳ್ಳುವುದಕ್ಕೆ ವಿಳಂಬವಾಗಿತ್ತು. ಜನೇವರಿ 7, 2016 ಅವರು ಅಧಿಕಾರ ಸ್ವೀಕರಿಸಿದ್ದರು.
ತಾವು ನಿರ್ಗಮಿಸುವ ಗಳಿಗೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ರಾಜಕೀಯದಿಂದ ದೂರ ಉಳಿದು ನಿಮ್ಮ ಗುರಿ ತಲುಪಲು ಪರಿಶ್ರಮ ಪಡಿ ಎಂದು ಸಲಹೆ ನೀಡಿದ್ದಾರೆ.