ಭಾರತ- ಪಾಕ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕಾರ್ಯಾಚರಣೆಯ ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದು ವಿವೇಕಯುತವಲ್ಲ ಎಂದು ಉತ್ತರ ಪ್ರದೇಶದ ಸಮಾಜವಾದಿ ನಾಯಕ, ಸಚಿವ ಆಜಂ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ ಪಡಿಸುವುದು ವಿವೇಕಯುತವಾದದ್ದು ಎಂದು ನನಗನ್ನಿಸುವುದಿಲ್ಲ. ಈ ಹಿಂದೆ ಕೂಡ ಇಂತಹ ದಾಳಿಯನ್ನು ಕೈಗೊಳ್ಳಲಾಗಿತ್ತು. ಆದರೆ ವಿಡಿಯೋವನ್ನು ಬಹಿರಂಗ ಪಡಿಸಿರಲಿಲ್ಲ. ನಾವು ಇಂತಹ ದಾಳಿಗಳ ಪ್ರಚಾರವನ್ನು ಕೈಗೊಂಡಿರಲಿಲ್ಲ ಎಂದು ಆಜಂ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿಯ ವಿಡಿಯೋ ಬಹಿರಂಗಪಡಿಸುವ ಚರ್ಚೆ ಆರಂಭವಾಗುತ್ತಿದ್ದಂತೆ, ಭಾರತೀಯ ಸೇನೆ ಸೀಮಿತ ದಾಳಿಯ ವಿಡಿಯೋವನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಿದೆ. ವಿಡಿಯೋ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಹಂಸರಾಜ್ ಹೇಳಿದ್ದರು.
ಆದರೆ ಒಂದು ವೇಳೆ ವಿಡಿಯೋ ಬಿಡುಗಡೆ ಮಾಡಿದರೆ ಅದು ಪಾಕಿಸ್ತಾನಕ್ಕೆ ಸಹಕಾರಿಯಾಗಲಿದೆ. ಭಾರತ ಹೇಗೆ ಕಾರ್ಯಾಚರಮೆ ನಡೆಸಿತ್ತು ಎಂಬುದು ಪಾಕಿಸ್ತಾನಕ್ಕೆ ಮತ್ತು ಉಗ್ರರಿಗೆ ಗೊತ್ತಾದರೆ ಭವಿಷ್ಯದಲ್ಲಿ ಅದು ನಮಗೆ ಮಾರಕ ಎಂಬ ಹಿನ್ನೆಲೆಯಲ್ಲಿ ವಿಡಿಯೋವನ್ನು ಬಹಿರಂಗ ಪಡಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ