ಉದಕಮಂಡಲಂ:ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತವಾಗಿ ಗೈರು ಹಾಜರಾಗುತ್ತಿದ್ದ 8 ಖ್ಯಾತ ತಮಿಳು ನಟರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಖ್ಯಾತ ನಟರಾದ ಸೂರ್ಯ, ಆರ್ ಶರತ್ ಕುಮಾರ್, ಬಾಹುಬಲಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಶ್ರೀಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್, ವಿವೇಕ್, ಚರಣ್ ಸೇರಿದಂತೆ 8 ಮಂದಿ ವಿರುದ್ಧ ಊಟಿಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ತಮಿಳು ಚಿತ್ರರಂಗದ ನಟಿಯರ ಮಾನಹಾನಿ ಮಾಡುವಂತಹ ಲೇಖನ ಪ್ರಕಟಿಸಿದ್ದ ತಮಿಳು ದೈನಿಕದ ವಿರುದ್ಧ 2009ರ ಅಕ್ಟೋಬರ್ 7ರಂದು ದಕ್ಷಿಣ ಭಾರತ ನಟರ ಅಸೋಸಿಯೇಶನ್(ನಾಡಿಗರ್ ಸಂಘಂ) ಚೆನ್ನೈನಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿತ್ತು. ಈ ಸಭೆಯಲ್ಲಿ ಎಲ್ಲಾ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಊಟಿಯ ಅರೆಕಾಲಿಕ ಪತ್ರಕರ್ತರಾದ ಎಂ ರೋ಼ಝಾರಿಯೋ ದೂರು ದಾಖಲಿಸಿದ್ದರು.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಊಟಿಯ ಅರೆಕಾಲಿಕ ಪತ್ರಕರ್ತರಾದ ಎಂ ರೋ಼ಝಾರಿಯೋ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ 2011ರಂದು ನಟರುತಮ್ಮ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕೆಂದು ಕೋರಿ ಮದರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. 2017ರ ಮೇ 15ರಂದು ಮತ್ತೆ ಪ್ರಕರಣದ ವಿಚಾರಣೆ ನಡೆದಾಗಲೂ ನಟರು ಕೋರ್ಟ್ ಗೆ ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಇಂದು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.