ನವದೆಹಲಿ: 2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ತನಗಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಜೆಡಿಯು ಧುರೀಣ ಇದೀಗ ಮಿತ್ರ ಪಕ್ಷವಾಗಿದ್ದ ಕಾಂಗ್ರೆಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸುವ ರಾಜಕಾರಣ ಮಾಡಬೇಕಿತ್ತು. ಆದರೆ ಅದೀಗ ಕ್ರಿಯಾಶೀಲತೆಯನ್ನೇ ಮರೆತಿದೆ ಎಂದು ನಿತೀಶ್ ಕುಮಾರ್ ಆ ಪಕ್ಷದೊಂದಿಗಿನ ಒಡಕಿನ ಕಾರಣ ವಿವರಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆ ವಿಚಾರವಾಗಿ ತನ್ನ ಮಿತ್ರ ಪಕ್ಷ ಆರ್ ಜೆಡಿ, ಕಾಂಗ್ರೆಸ್ ನೊಂದಿಗೆ ಜೆಡಿಯು ವರಿಷ್ಠ ನಂಟು ಕಡಿದುಕೊಂಡು ವಿರೋಧಿ ಬಿಜೆಪಿ ಪಾಳಯ ಸೇರಿದ್ದಾರೆ. ಎನ್ ಡಿಎ ಅಭ್ಯರ್ಥಿ ರಮಾನಾಥ್ ಕೋವಿಂದ್ ಗೆ ಅವರು ಬೆಂಬಲ ನೀಡುತ್ತಿರುವುದು ಲಾಲೂ ಪ್ರಸಾದ್ ಯಾದವ್ ಕೆಂಗಣ್ಣಿಗೆ ಗುರಿಯಾಗಿದೆ.
ಮುಂದಿನ ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಿತೀಶ್ ಈ ನಿರ್ಧಾರ ಕೈಗೊಂಡಿದ್ದಾರೆಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಯಾವುದೇ ಇರಾದೆ ತಮಗಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ