ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಪ್ರತಿಷ್ಠಿತ ರಾಷ್ಟ್ರಪತಿ ಭವನಕ್ಕೆ ಮುಂದಿನ ಐದು ವರ್ಷಗಳಿಗೆ ಯಾರು ಒಡೆಯರಾಗಿರುತ್ತಾರೆ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ದೊರಕಲಿದೆ.
ಎನ್ ಡಿ ಎ ಅಭ್ಯರ್ಥಿ ರಮಾನಾಥ್ ಕೋವಿಂದ್ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಪೈಪೋಟಿ ನಡೆದಿತ್ತು. ಬಹುತೇಕ ಎನ್ ಡಿಎ ಅಭ್ಯರ್ಥಿ ರಮಾನಾಥ್ ಗೆಲುವು ಪಕ್ಕಾ ಆಗಿದೆ. ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆದಿತ್ತು.
ಇಂದು ಬೆಳಿಗ್ಗೆ 11 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಸಂಜೆ 5 ಗಂಟೆ ವೇಳೆಗೆ ಅಧಿಕೃತವಾಗಿ ಗೆದ್ದವರು ಯಾರೆಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಮೊದಲು ಸಂಸತ್ ಭವನದಲ್ಲಿ ನಡೆದ ಮತದಾನದ ಮತ ಎಣಿಕೆ ನಡೆಯಲಿದೆ. ನಂತರ ವಿವಿಧ ರಾಜ್ಯಗಳಿಂದ ಬಂದ ಮತಪತ್ರಗಳ ಎಣಿಕೆ ನಡೆಯುತ್ತದೆ.
ಮತ ಎಣಿಕೆ ಸಂದರ್ಭ ರಾಷ್ಟ್ರಪತಿ ಅಭ್ಯರ್ಥಿಗಳಾದ ಮೀರಾ ಕುಮಾರ್ ಮತ್ತು ರಮಾನಾಥ್ ಉಪಸ್ಥಿತರಿರುತ್ತಾರೆ. ಅಲ್ಲದೆ, ಚುನಾವಣಾ ಆಯೋಗದ ಪ್ರತಿನಿಧಿಗಳ ಕಣ್ಗಾವಲಿನಲ್ಲಿ ಮತಎಣಿಕೆ ನಡೆಯುತ್ತದೆ.