ಅಣ್ಣಾ ಡಿಎಂಕೆ ಪಕ್ಷದ ಹಿರಿಯ ನಾಯಕ, ಪ್ರಮುಖ ವಾಗ್ಮಿ ನಂಜಿಲ್ ಸಂಪತ್ ಪಕ್ಷ ತೊರೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ತಮಗೆ ನೀಡಿದ್ದ ಇನ್ನೋವಾ ಕಾರನ್ನು ರಾಯಪೇಟೆಯಲ್ಲಿರುವ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಮರಳಿಸಿ ರಾಜಕೀಯ ಸನ್ಯಾಸವನ್ನು ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.
ಪ್ರಚಾರ ವಿಭಾಗದ ಸಹಕಾರ್ಯದರ್ಶಿಯಾಗಿದ್ದ ಸಂಪತ್‌ರ 20145ರ ಪ್ರವಾಹದ ಸಂದರ್ಭದಲ್ಲಿ ಜಯಾ ಸರ್ಕಾರವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಎಲ್ಲ ಸ್ಥಾನಗಳಿಂದ ಜಯಾ ಕಿತ್ತು ಹಾಕಿದ್ದರು.
ಹೀಗಾಗಿ ಹಲವು ತಿಂಗಳಿಂದ ಪಕ್ಷದಿಂದ ದೂರ ಕಾಯ್ದುಕೊಂಡಿದ್ದ ಸಂಪತ್ ಮಂಗಳವಾರ ಪಕ್ಷವನ್ನು ತೊರೆದಿದ್ದಾರೆ.
2012ರಲ್ಲಿ ಸಂಪತ್ ಎಮ್‌ಡಿಎಂಕೆ ತೊರೆದು ಎಐಡಿಎಂಕೆ ಸೇರಿದ ಸಂದರ್ಭದಲ್ಲಿ ಜಯಾರಿಂದ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು.
ತಾವು ಖಾಸಗಿ ಕಾರಣಕ್ಕೆ ಎಂದಿಗೂ ಈ ಕಾರನ್ನು ಬಳಸಿಲ್ಲ. ಕಳೆದ ಅನೇಕ ತಿಂಗಳಿಂದ ಚುನಾವಣಾ ಪ್ರಚಾರವಿಲ್ಲದಿದ್ದುದರಿಂದ ನನ್ನ ಸ್ನೇಹಿತನ ಮನೆಯಲ್ಲಿ ಪಾರ್ಕ್ ಮಾಡಿಟ್ಟಿದ್ದೆ. ನಾನು ಇನ್ನೊವಾ ಸಂಪತ್ ಎಂದು ಕರೆದುಕೊಳ್ಳಲು ಬಯಸವುದಿಲ್ಲ, ಹೀಗಾಗಿ ಕಾರನ್ನು ಮರಳಿಸುತ್ತಿದ್ದೇನೆ ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.