ದೆಹಲಿಯ ಉಪ ರಾಜ್ಯಪಾಲ ಸ್ಥಾನಕ್ಕೆ ನಿನ್ನೆಯಷ್ಟೇ ರಾಜೀನಾಮೆ ಇತ್ತ ನಜೀಬ್ ಜಂಗ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.
ವರದಿಗಳ ಪ್ರಕಾರ, ಮೋದಿ ಉಪರಾಜ್ಯಪಾಲ ಸ್ಥಾನದಲ್ಲಿ ಮುಂದುವರೆಯುವಂತೆ ಹೇಳಿದರು. ಆದರೆ ಜಂಗ್ ನಯವಾಗಿ ಪ್ರಸ್ತಾಪವನ್ನು ನಿರಾಕರಿಸಿದರು.
ತಾವು ಹೆಚ್ಚಿನ ಸಮಯವನ್ನು ಕುಟುಂಬದ ಜತೆ ಕಳೆಯಲು ಬಯಸುತ್ತೇನೆ ಮತ್ತು ಪುಸ್ತಕ ಬರೆಯುವುದಕ್ಕೆ ಸಮಯವನ್ನು ಮೀಸಲಾಗಿಡ ಬಯಸುತ್ತೇನೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ. ಇದು ನಾನು ಬಹಳ ಹಿಂದೆ ತೆಗೆದುಕೊಂಡ ನಿರ್ಧಾರ ಎಂದು ಜಂಗ್ ಪ್ರಧಾನಿ ಮೋದಿ ಬಳಿ ಹೇಳಿದ್ದಾಗಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
ಒತ್ತಡಕ್ಕೊಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಊಹಾಪೋಹಗಳನ್ನು ಅವರು ಅಲ್ಲಗಳೆದಿದ್ದಾರೆ.
ನನಗೆ 95 ವರ್ಷದ ತಾಯಿ ಇದ್ದಾಳೆ. ಅವಳಿಗೆ ಸಮಯವನ್ನು ನೀಡಬೇಕು. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೂ ಸಮಯವನ್ನು ಮೀಸಲಾಗಿಡಬೇಕು. ಈ ಹುದ್ದೆಯಲ್ಲಿ ನನಗೆ ರಜೆ ಪಡೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ ಜಂಗ್
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನೇಮಿಸಲ್ಪಟ್ಟಿದ್ದ ನಾನು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜೀನಾಮೆ ನೀಡುವ ಪ್ರಸ್ತಾಪವನ್ನಿಟ್ಟಿದ್ದೆ. ಆದರೆ ಮೋದಿ ಮುಂದುವರೆಯುವಂತೆ ಹೇಳಿದ್ದರು. ನಾನು ರಾಜೀನಾಮೆ ಮಾತನಾಡಿದಾಗಲೆಲ್ಲ ಮೋದಿ ಮುಂದುವರೆಯಿರಿ ಎನ್ನುತ್ತಿದ್ದರು. ಆದರೆ ಈ ಬಾರಿ ನನ್ನದು ದೃಢ ನಿಶ್ಚಯ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.