ಉತ್ತರಪ್ರದೇಶದಲ್ಲಿ ಅಧಿಕಾರಕ್ಕಾಗಿ ಹಣಾಹಣಿ ನಡೆಯುತ್ತಿರುವ ಮಧ್ಯೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಅವರ ಮಲತಾಯಿ (ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಎರಡನೆಯ ಪತ್ನಿ) ಪಿತೂರಿ ನಡೆಸುತ್ತಿದ್ದಾರೆ ಎಂದು ಅಖಿಲೇಶ್ ಆಪ್ತರೊಬ್ಬರು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಅಖಿಲೇಶ್ ವಿರುದ್ಧ ಅವರ ಪರಿವಾರದವರೇ ಪಿತೂರಿ ನಡೆಸುತ್ತಿದ್ದಾರೆ. ಅವರ ಮಲತಾಯಿ ಸಾಧನಾ ಮಾಟ-ಮಂತ್ರ ಮಾಡಿಸುತ್ತಿದ್ದಾರೆ. ನೀವು (ಮುಲಾಯಂ ಸಿಂಗ್ ಯಾದವ್) ಮಗನ ಹಾದಿಯನ್ನು ಸುಗಮಗೊಳಿಸಲು ಮುಂದಾಗಬೇಕು ಎಂದು ಸಮಾಜವಾದಿ ಪಕ್ಷದ ನಾಯಕ , ವಿಧಾನ ಪರಿಷತ್ ಸದಸ್ಯ, ಅಖಿಲೇಶ್ ಆಪ್ತರೆಂದು ಗುರುತಿಸಿಕೊಳ್ಳುವ ಉದಯ್ ವೀರ್ ಸಿಂಗ್ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ತಮ್ಮ ಅಣ್ಣನ ಪುತ್ರನ ಬೆಳವಣಿಹೆ ಅಸೂಯೆ ತರಿಸಿದೆ. ಹೀಗಾಗಿ ತಮ್ಮ ಅತ್ತಿಗೆಯ ಜತೆ ಸೇರಿ ಮಾಟ ಮಂತ್ರ ಮಾಡಿಸುತ್ತಿದ್ದಾರೆ ಎಂದು ಉದಯ್ ವೀರ್ ಸಿಂಗ್ ಪತ್ರದಲ್ಲಿ ಆರೋಪಿಸಿದ್ದಾರೆ.