ತಾವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುತ್ತಿದ್ದಂತೆ ಒಬ್ಬರಾದ ಮೇಲೊಬ್ಬರು ಅವರಿಗೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದಾರೆ. ಸಾರ್ವಜನಿಕರ ಸಂಕಷ್ಟಗಳಿಗೆ ಕೊಡುವ ತ್ವರಿತ ಸ್ಪಂದನೆಯಿಂದಾಗಿ ಅವರು ಗಳಿಸಿರುವ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಸಚಿವೆ ಸುಷ್ಮಾ ಅವರಿಗೆ ತಾವು ಕಿಡ್ನಿ ದಾನ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಮಧ್ಯಪ್ರದೇಶದ ಸಂಚಾರಿ ಪೊಲೀಸ್ ಪೇದೆಯೊಬ್ಬರು ತಾವು ಸಹ ಸಚಿವೆಗೆ ಕಿಡ್ನಿ ದಾನ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.
"ನಾನು ಸಚಿವೆಗೆ ನನ್ನ ಕಿಡ್ನಿಗಳಲ್ಲಿ ಒಂದನ್ನು ದಾನ ಮಾಡಲು ಬಯಸುತ್ತೇನೆ, "ಎಂದು 26 ವರ್ಷದ ಪೇದೆ ಗೌರವ್ ಸಿಂಗ್ ದಾಂಗಿ ಹೇಳಿದ್ದಾರೆ.
"ಸಚಿವೆಯ ಮೂತ್ರಪಿಂಡ ವೈಫಲ್ಯವಾಗಿದೆ ಎಂದು ತಿಳಿದ ಕೂಡಲೇ ನನಗೆ ತುಂಬಾ ಚಿಂತೆಯಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ನನ್ನ ಕಿಡ್ನಿ ಅವರಿಗೆ ಹೊಂದುತ್ತದೆ ಎಂದು ಖಚಿತವಾದರೆ ನನ್ನ ಒಂದು ಕಿಡ್ನಿಯನ್ನು ಅವರಿಗೆ ನೀಡುತ್ತೇನೆ", ಎಂದಾತ ಹೇಳಿದ್ದಾನೆ.
ತಿಕಮ್ ಗಢದ ನಿವಾಡಿ ತೆಹ್ಸಿಲ್ ಅಡಿಯಲ್ಲಿ ಬರುವ ತಿಹಾರ್ಕಾ ಗ್ರಾಮದ ನಿವಾಸಿಯಾಗಿರುವ ಗೌರವ್ ಕಳೆದ ಮೂರುವರೆ ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿದ್ದಾನೆ.
ನಿಮ್ಮ ಈ ನಿರ್ಧಾರಕ್ಕೆ ಕಾರಣವೇನೆಂದು ಕೇಳಲಾಗಿ, "ಅವರ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರು ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಅತ್ಯುತ್ತಮ ನಾಯಕಿ. ಹೀಗಾಗಿ ನಾನು ನನ್ನ ಕಿಡ್ನಿಯನ್ನು ಅವರಿಗೆ ದಾನ ಮಾಡಲು ಬಯಸಿದ್ದೇನೆ ಮತ್ತು ಟ್ವಿಟರ್ ಮೂಲಕ ಇದನ್ನು ಅವರಿಗೆ ತಿಳಿಸಿದ್ದೇನೆ ಎಂದಾತ ಹೇಳಿದ್ದಾನೆ.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು, ದೆಹಲಿಯಲ್ಲಿರುವ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಿಗೆ ಕಿಡ್ನಿ ಕಸಿ ಮಾಡಲು ವೈದ್ಯರು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ಕುರಿತು ಸುಷ್ಮಾ ಟ್ವಿಟರ್ ಮೂಲಕ ಕಳೆದೆರಡು ದಿನಗಳ ಹಿಂದೆ ಮಾಹಿತಿ ನೀಡಿದ್ದಾರೆ. "ನನಗೆ ಕಿಡ್ನಿ ವೈಫಲ್ಯವಾಗಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕಸಿ ಮಾಡಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.ಸದ್ಯ ನನಗೆ ಡಯಾಲಿಸೀಸ್ ಮಾಡಲಾಗುತ್ತಿದ್ದು ಭಗವಾನ್ ಶ್ರೀಕೃಷ್ಣನ ಶ್ರೀರಕ್ಷೆ ನನಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಎಂಡೋಕ್ರಾನಿಕಲ್ ಪರೀಕ್ಷೆಗಳಿಗಾಗಿ ನವೆಂಬರ್ 7 ರಂದು ಸುಷ್ಮಾ ಏಮ್ಸ್‌ಗೆ ದಾಖಲಾಗಿದ್ದರು.
ಸುಷ್ಮಾ ಕಳೆದ ಏಪ್ರಿಲ್ ತಿಂಗಳಲ್ಲಿ ಶ್ವಾಶಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ