ಬಿಲ್ಡರ್ನೊಬ್ಬ ತನ್ನ ಗೆಳೆಯರ ಜೊತೆಗೂಡಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದಿದ್ದು, ಬಳಿಕ ಆಕೆಯ ತಾಯಿ ಮೇಲೆ ಗುಂಡು ಹಾರಿಸಿದ್ದಾವೆ. ನವದೆಹಲಿಯ ಜಾಮಿಯಾ ನಗರದ ಪ್ರದೇಶದಲ್ಲಿ ಈ ಹೇಯ ಕೃತ್ಯ ನಡೆದಿದೆ.
ಬಾಲಕಿ ಮೇಲೆ ಕಳೆದ 6 ತಿಂಗಳಿಂದ ಅತ್ಯಾಚಾರ ನಡೆಸಲಾಗಿತ್ತು. ಇತ್ತೀಚಿಗೆ ಈ ಪ್ರಕರಣ ಬೆಳಕಿಗೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿ ಆಕೆಯ ಬಳಿ ಇದ್ದು ನೋಡಿಕೊಳ್ಳುತ್ತಿದ್ದಳು.
ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಪೀಡಿತಳ ಕುಟುಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.
ಪೀಡಿತಳ ಪರಿವಾರದವರು ಹೇಳುವ ಪ್ರಕಾರ ಆರೋಪಿ ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದ, ಇಲ್ಲದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಕೂಡ ಹಾಕಿದ್ದ. ಅಂತೆಯೇ ಪೀಡಿತಳ ತಾಯಿಯ ಮೇಲೆ ಗುಂಡು ಹಾರಿಸಿದ್ದಾನೆ. ತಕ್ಷಣ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಬಿಲ್ಡರ್ ತನ್ನ ಸ್ನೇಹಿತರ ಜತೆ ಸೇರಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ. ಈ ಕೃತ್ಯದ ವಿಡಿಯೋ ಚಿತ್ರೀಕರಣ ನಡೆಸಿ, ವಿಷಯವನ್ನು ಬಹಿರಂಗ ಪಡಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಸಿದ್ದ. ಆತನ ಕೀಚಕತನದಿಂದ ಬಾಲಕಿ ಗರ್ಭಿಣಿಯಾಗಿದ್ದು ಸಂಪೂರ್ಣ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ.
ಸ್ವಯಂ ಸೇವಾ ಸಂಸ್ಥೆಯೊಂದರ ಸಹಾಯದಿಂದ ತಾಯಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ