ದೇಶಾದ್ಯಂತ ತೀವ್ರ ಸಂಚಲವನ್ನು ಮೂಡಿಸಿರುವ ಸುಗಂಧದ್ರವ್ಯ ತಜ್ಞೆ ಮೋನಿಕಾ ಘುರ್ಢೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸತ್ಯ ಹೊರಬಿದ್ದಿದೆ. ಹತ್ಯೆಗೂ ಮುನ್ನ ಆಕೆಗೆ ಬಲವಂತವಾಗಿ ನೀಲಿ ಚಿತ್ರಗಳನ್ನು ತೋರಿಸಿ ಅತ್ಯಾಚಾರ ಎಸಗಿದ್ದೆ ಎಂದು ಆರೋಪಿ ರಾಜಕುಮಾರ್ ಸಿಂಗ್ ಬಾಯ್ಬಿಟ್ಟಿದ್ದಾನೆ.
ರಾಷ್ಟ್ರೀಯ ಸುದ್ದಿಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಆರೋಪಿ ಮೋನಿಕಾಗೆ ಮೂರು ಫೋರ್ನ್ ಕ್ಲಿಪ್‌ಗಳನ್ನು ಬಲವಂತವಾಗಿ ತೋರಿಸಿದ್ದೆ ಎಂದು ಸಿಂಗ್ ಗೋವಾ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.
ಇದು ಆಕಸ್ಮಿಕವಾಗಿ ಆದ ಕೊಲೆ ಎಂದು ಆರೋಪಿ ಈ ಮೊದಲು ನೀಡಿದ್ದ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ್ದು, ಇದು ಪೂರ್ವ ನಿಯೋಜಿತ ಕೊಲೆ ಎಂದಿದ್ದಾರೆ.
ಸಿಂಗ್ ನಡೆಸಿದ ಕ್ರೌರ್ಯವನ್ನು ಪೊಲೀಸರು ಬಿಚ್ಚಿಟ್ಟಿದ್ದು ಹೀಗೆ: ಭದ್ರತಾ ಮೇಲ್ವಿಚಾರಕನ ಸೋಗಿನಲ್ಲಿ ಅಕ್ಟೋಬರ್ 5 ರಂದು ಮೋನಿಕಾ ಮನೆ ಕದ ಬಡಿದ ಆರೋಪಿ, ಕದ ತೆರೆದ ಕೂಡಲೇ ಆಕೆಯ ಕುತ್ತಿಗೆಗೆ ಚಾಕು ಹಿಡಿದು ಬಲವಂತವಾಗಿ ಮನೆ ಒಳಗೆ ಪ್ರವೇಶಿಸಿದ್ದಾನೆ. ಆಕೆ ಕೂಗಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ, ಕೈಗಳನ್ನ ಹಿಂದಕ್ಕೆ ಕಟ್ಟಿ ಬಾತ್ ರೂಮ್ ಒಳಕ್ಕೆ ಎಳೆದೊಯ್ದಿದ್ದಾನೆ.
ಅಷ್ಟರಲ್ಲಾಗಲೇ ಮೋನಿಕಾ ಸುಸ್ತಾಗಿ ಅರೆ ಪ್ರಜ್ಞಾವಸ್ಥೆಗೆ ಜಾರಿದ್ದರು. ಈ ದಯನೀಯ ಸ್ಥಿತಿಯಲ್ಲಿ ಆಕೆಯನ್ನು ಬೆಡ್ ರೂಮ್‌ಗೆ ಎಳೆದೊಯ್ದ ಆತ ಆಕೆಯ ಕೈ-ಕಾಲುಗಳನ್ನು ಬೆಡ್‌ಗೆ ಕಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಜೀವ ಬೆದರಿಕೆಗೊಳಗಾದ ಮೋನಿಕಾ ತನ್ನ ಪರ್ಸ್‌ನಲ್ಲಿ ಎಷ್ಟು ಹಣವಿದೆಯೋ ಅದೆಲ್ಲವನ್ನು ತೆಗೆದುಕೊಳ್ಳುವಂತೆ ಹೇಳಿದ್ದಾಳೆ. ಆಕೆಯ ಪರ್ಸ್‌ನಲ್ಲಿ ಆತನಿಗೆ ಸಿಕ್ಕಿದ್ದು 4,000 ರೂಪಾಯಿ. ಇದು ಸಾಕಾಗುವುದಿಲ್ಲ ಎಂದ ಆತ ಮತ್ತಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾನೆ. ಆತನಿಗೆ ತನ್ನ ಎಟಿಎಂ ಕಾರ್ಡ್ ಕೊಟ್ಟ ಆಕೆ, ಪಿನ್ ನಂಬರ್ ಕೂಡ ಹೇಳಿದ್ದಾಳೆ.
ಬಳಿಕ ಆಕೆಯ ಮೊಬೈಲ್ ಫೋನ್ ಎತ್ತಿಟ್ಟುಕೊಂಡ ಆತ ಅದರ ಪಾಸ್ ವರ್ಡ್ ಕೂಡ ಪಡೆದಿದ್ದಾನೆ. ಬಳಿಕ ಆಕೆಗೆ ಮೂರು ನೀಲಿ ಚಿತ್ರಗಳನ್ನು ಬಲವಂತವಾಗಿ ತೋರಿಸಿದ್ದಾನೆ. ಬಳಿಕ ಆಕೆಯ ಕಾಲು ಬಿಚ್ಚಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.
ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕಿರುವ ತಲೆಗೂದಲನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೃತ್ಯದಲ್ಲಿ ಎರಡೆಯ ವ್ಯಕ್ತಿ ಕೈವಾಡವಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಪಂಜಾಬ್‌ನ ಬತಿಂದಾ ಮೂಲದ ಆರೋಪಿ ರಾಜ್ ಕುಮಾರ್ ಸಿಂಗ್(21) ನನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಗೋವಾದ ಖ್ಯಾತ ಸುಗಂಧದ್ರವ್ಯ ತಜ್ಞೆ ಮೋನಿಕಾ ಘುರ್ಡೆ ಅಕ್ಟೋಬರ್ 6 ರಂದು ಗೋವಾದ ಸಂಗೊಲ್ಡಾದಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದ ಆರೋಪಿಯನ್ನು ಘಟನೆ ನಡೆದ ಮೂರು ದಿನಗಳ ಬಳಿಕ ಗೋವಾ, ಮಂಗಳೂರು, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಬಂಧಿಸಲಾಗಿತ್ತು
ಬಂಧಿತ ಆರೋಪಿ ಸಿಂಗ್ ಅಪಾರ್ಟಮೆಂಟ್‌ನಲ್ಲಿ ಮೋನಿಕಾ ವಾಸವಾಗಿದ್ದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ .
ಛತ್ರಿ ವಿಚಾರಕ್ಕೆ ಮೋನಿಕಾ ಮತ್ತು ಸಿಂಗ್‌ಗೆ ಜಗಳವಾಗಿತ್ತು. ಈ ಗಲಾಟೆ ಬಳಿಕ ಕೆಲ ಕಳೆದುಕೊಂಡಿದ್ದ ಸಿಂಗ್‌ಗೆ ಬಳಿಕ ಮತ್ತೆಲ್ಲೂ ಕೆಲಸ ಸಿಕ್ಕಿರಲಿಲ್ಲ. ಇದೇ ಸಿಟ್ಟಲ್ಲಿ ಆತ ಮೋನಿಕಾಳನ್ನು ಕೊಲೆಗೈದಿದ್ದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಹೊರಬಿದ್ದಿತ್ತು.
ವರದಿಗಳ ಪ್ರಕಾರ, ಮೋನಿಕಾ ಘುರ್ಡೆ ಹತ್ಯೆ ಬಳಿಕ ಆರೋಪಿ ಅವರ 2 ಎಟಿಎಂ ಕಾರ್ಡ್ ಮತ್ತು ಮೊಬೈಲ್ ಕದ್ದಿದ್ದ ಮತ್ತು ಘಟನೆ ನಡೆದ ಒಂದು ಗಂಟೆಯೊಳಗೆ ಅದೇ ಎಟಿಎಂ ಬಳಸಿ ಆರೋಪಿ ಹಣ ತೆಗೆಯುತ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ