ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಯೋಧರ ರುಂಡ ಕಡಿದು ತರುತ್ತೇವೆಂದು ಈ ಹಿಂದೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಸರ್ಕಾರದ ಆ ಭರವಸೆ ಏನಾಯ್ತು...? ಇದು ಪಾಕ್ ಯೋಧರಿಂದ ಶಿರಚ್ಛೇಧನಕ್ಕೊಳಗಾದ ಭಾರತೀಯ ಯೋಧರೊಬ್ಬರ ತಾಯಿಯ ಸಂಕಟದ ಪ್ರಶ್ನೆ.
ಹೌದು. 2013 ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತರಾಗಿದ್ದ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನ ಸೈನಿಕರು, ಶಿರಚ್ಛೇದ ಮಾಡಿದ್ದರು. ಅಂದು ಕೇಂದ್ರ ಸರ್ಕಾರ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಸೈನಿಕರ ರುಂಡವನ್ನು ಕಡಿದು ತರುತ್ತೇವೆಂದು ಹೇಳಿತ್ತು. ಇದನ್ನೇ ಪ್ರಶ್ನಿಸಿರುವ ಹೇಮ್ರಾಜ್ ತಾಯಿ ಈ ಹಿಂದೆ ನಡೆದಿದ್ದ ಘಟನೆ ಈಗ ಮತ್ತೆ ಮರುಕಳಿಸಿದೆ. ಭಾರತದ ಗಡಿಯಲ್ಲಿ ನುಗ್ಗಿ ಪಾಕ್ ಸೈನಿಕರು ಯೋಧರ ಶಿರಚ್ಛೇಧನ ಮಾಡಿದ್ದಾರೆ. ಹೀಗಿದ್ದೂ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಸರ್ಕಾರ ನೀಡಿದ್ದ 10 ಪಾಕ್ ಯೋಧರ ರುಂಡದ ಭರವಸೆಯನ್ನೂ ಈವರೆಗೂ ಈಡೇರಿಸಿಲ್ಲ. ಎಲ್ಲಿ ಹೋಯಿತು 10 ಪಾಕಿಸ್ತಾನ ಸೈನಿಕರ ರುಂಡ ಎಂದು ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ತಾಯಿ ಪ್ರಶ್ನಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರ ಶಿರಚ್ಛೇದನ ಮಾಡಿ ಮತ್ತೆ ತನ್ನ ದುಷ್ಕೃತ್ಯ ಮೆರೆದಿದೆ. ಈಗಲಾದರೂ ಕೇಂದ್ರ ಸರ್ಕಾರ ಪಾಕ್ ವಿರುದ್ಧ ಕಠಿಣಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನದವರು ಅಂದು ನನ್ನ ಮಗನ ಶಿರಚ್ಛೇದ ಮಾಡಿದ್ದರು. ಪ್ರತೀನಿತ್ಯ ನಮ್ಮ ಸೈನಿಕರು ಬಲಿಯಾಗುತ್ತಿದ್ದಾರೆ. ಒಂದು ಮಗುವನ್ನು ಕಳೆದುಕೊಂಡಾಗ ಎಷ್ಟು ನೋವಿರುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಪಾಕಿಸ್ತಾನದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಲವತ್ತುಕೊಂಡಿದ್ದಾರೆ.