ನವದೆಹಲಿ: ಗರ್ಭಿಣಿ ಆನೆಗೆ ಸ್ಪೋಟಕ ತಿನಿಸಿ ಕೊಂದ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕಿ, ವನ್ಯ ಜೀವಿಗಳ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಕೇರಳದಲ್ಲಿ ಆನೆಗಳ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಕೇರಳದ ಆನೆ ದುರಂತದ ಬೆನ್ನಲ್ಲೇ ಮನೇಕಾ ನೀಡಿರುವ ವಿವರಗಳು ಬೆಚ್ಚಿ ಬೀಳಿಸುವಂತಿದೆ. ಕೇರಳದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಆನೆಯೊಂದರ ಹತ್ಯೆಯಾಗುತ್ತಿದೆ. ಅದರಲ್ಲೂ ಮಲಪ್ಪುರಂ ಜಿಲ್ಲೆಯಂತೂ ಅಪರಾಧಗಳ ಗೂಡಾಗಿದೆ ಎಂದು ಮನೇಕಾ ಆರೋಪಿಸಿದ್ದಾರೆ.
ಹಲವು ಬಾರಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲಿ ಒಟ್ಟಾರೆ 20 ಸಾವಿರ ಆನೆಗಳಿವೆ. ಆದರೆ ನಮ್ಮದೇ ತಪ್ಪಿನಿಂದಾಗಿ ದಿನೇ ದಿನೇ ಈ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಆನೆಗಳ ರಕ್ಷಣೆಗೆ ಕೇರಳದಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಬದಲಾಗಿ ಹಿಂಸಿಸುವ ಕೆಲಸ ಮಾಡಲಾಗುತ್ತಿದೆ. ಇದರ ಬಗ್ಗೆ ಯಾರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮನೇಕಾ ಹೇಳಿದ್ದಾರೆ.