ಇತರ ಬಿಜೆಪಿ ಮುಖಂಡರಿಗೆ ಬ್ಯಾಂಕ್ ವಿವರಣೆಗಳನ್ನು ಕೋರುವ ಬದಲಿಗೆ ತಾಕತ್ತಿದ್ರೆ ನಿಮ್ಮ ಬ್ಯಾಂಕ್ ವಿವರಗಳನ್ನು ಬಹಿರಂಗ ಮಾಡಿ ಎಂದು ಪಶ್ಚಿಮ ಬಂಗಾಳಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ನೋಟು ನಿಷೇಧ ಜಾರಿಗೊಳಿಸಿ ಜನತೆಯ ಸಂವಿಧಾನ ಹಕ್ಕು ಕಸಿದುಕೊಂಡು ಮೊಹಮ್ಮದ್ ಬಿನ್ ತುಘಲಕ್ ಮತ್ತು ಹಿಟ್ಲರ್‌ನಂತೆ ಕೇಂದ್ರ ಸರಕಾರ ನಡೆಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಕೇಂದ್ರ ಸರಕಾರದ ನೋಟು ನಿಷೇಧದಿಂದಾಗಿ ಅಂಗಡಿ ಮುಗ್ಗಟ್ಟುಗಳು, ಮಾರುಕಟ್ಟೆ, ಸಣ್ಣ ವ್ಯಾಪಾರಿಗಳು, ಕೃಷಿ ಕಾರ್ಯಗಳಿಗೆ ಧಕ್ಕೆಯಾಗಿದ್ದರಿಂದ, ನೋಟು ನಿಷೇಧ ಹಿಂಪಡೆಯುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸಂಸದರು, ಶಾಸಕರು ತಮ್ಮ ತಮ್ಮ ಬ್ಯಾಂಕ್ ವಿವರಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ. ಆದರೆ, ಮೋದಿ ಮತ್ತು ಅಮಿತ್ ಶಾಗೆ ತಾಕತ್ತಿದ್ರೆ ಮೊದ್ಲು ತಮ್ಮ ತಮ್ಮ ಬ್ಯಾಂಕ್ ವಿವರಗಳನ್ನು ಸಲ್ಲಿಸಲಿ ಎಂದು ತಿರುಗೇಟು ನೀಡಿದ್ದಾರೆ.
ನೋಟು ನಿಷೇಧಕ್ಕೆ ಮುಂಚೆ ಬಿಜೆಪಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೆಸರಲ್ಲಿ ಭಾರಿ ಆಸ್ತಿಯನ್ನು ವರ್ಗಾಯಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.