ನೋಟು ನಿಷೇಧ ಜಾರಿಗೊಳಿಸಿದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಕಾಳಿದಾಸನಂತೆ,ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತ್ರ ದೇಶ ವಿನಾಶದಿಂದ ಉಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಪ್ರಧಾನಿಯಾಗಿರುವ ಮೋದಿ ಪ್ರಧಾನಿ ಸ್ಥಾನಕ್ಕೆ ಅನರ್ಹ ವ್ಯಕ್ತಿ. ಅವರು ತಾನೇ ಕುಳಿತ ಮರದ ಟೊಂಗೆಯನ್ನು ಕತ್ತರಿಸಿದ ಕಾಳಿದಾಸನಂತೆ. ನನ್ನ ಪ್ರಕಾರ ಇಂತಹ ಸ್ಥಿತಿಯಿಂದ ದೇಶವನ್ನು ರಾಷ್ಟ್ರಪತಿ ಮಾತ್ರ ಬಚಾವ್ ಮಾಡಬಲ್ಲರು ಎಂದು ಕಿಡಿಕಾರಿದ್ದಾರೆ.
ನೋಟು ನಿಷೇಧದಿಂದಾಗಿ ದೇಶದಲ್ಲಿ ಉಂಟಾಗಿರುವ ಅರಾಜಕತೆ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರಪತಿ ಮುಖರ್ಜಿ ದೇಶದಲ್ಲಿ ರಾಷ್ಟ್ರಪತಿ ಅಡಳಿತ ಹೇರುವುದು ಸೂಕ್ತ. ಒಂದು ವೇಳೆ ಆಡ್ವಾಣಿ, ರಾಜನಾಥ್ ಸಿಂಗ್ ಅಥವಾ ಅರುಣ್ ಜೇಟ್ಲಿ ಸರಕಾರವನ್ನು ಮುನ್ನಡೆಸಿದಲ್ಲಿ ನನಗೆ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರದ ನೋಟು ನಿಷೇಧ ರಾಜ್ಯದಲ್ಲಿ 1.7 ಕೋಟಿ ಜನರ ಮೇಲೆ ನೇರ ಪರಿಣಾಮ ಬೀರಿದೆ. 81.5 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ.
ಭಾರತ ದೇಶ ಅಭಿವೃದ್ಧಿಯಲ್ಲಿ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ನೋಟು ನಿಷೇಧ ದೇಶದ ಆರ್ಥಿಕತೆಯನ್ನು ಅಧೋಗತಿಗೆ ಇಳಿಸಿದೆ. ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಅಗತ್ಯ ವಸ್ತುಗಳ ದರಗಳಲ್ಲಿ ಹೆಚ್ಚಳವಾಗಲಿದೆ. ಕೇಂದ್ರ ಸರಕಾರ ಹೊಣೆ ಹೊರಲಿದೆಯೇ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.