ಮಹಾರಾಷ್ಟ್ರದ ಪೋಸ್ಟ್ ಆಫೀಸ್`ಗಳು ಸದ್ಯದಲ್ಲೇ ಬಹುಉಪಯೋಗಿ ಕೇಂದ್ರಗಳಾಗಿ ಬದಲಾಗಲಿವೆ. ಇಲ್ಲಿ ಕೇವಲ ಕಾಗದ ಪತ್ರಗಳು ಮಾತ್ರ ದೊರೆಯುವುದಿಲ್ಲ. ಆಧಾರ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ ಸಹ ಇಲ್ಲೇ ಸಿಗಲಿವೆ.
ಹೊಸ ಚಟುವಟಿಕೆಗೆ ಈಗಾಗಲೇ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಲ್ಲಿ ಸರ್ವರ್ ಮತ್ತು ಇಂಟರ್ನೆಟ್ ಸೇರಿದಂತೆ ತಾಂತ್ರಿಕ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಕೆಲ ತಿಂಗಳಲ್ಲಿ ಹೊಸ ಸೇವೆ ಆರಂಭಿಸುವುದಾಗಿ ಕೇಂದ್ರ ಅಂಚೆ ಕಚೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ದಿ ಏಶಿಯನ್ ಏಜ್ ವರದಿ ಮಾಡಿದೆ.
ಅಷ್ಟೇ ಅಲ್ಲ, ಹೊಸ ಸೇವೆ ಒದಗಿಸುತ್ತಿರುವ ಪೋಸ್ಟ್ ಆಫೀಸ್`ಗಳ ಪೈಕಿ ಮುಂಬೈನ ಪಶ್ಚಿಮ ವಲಯದ 2 ಪೋಸ್ಟ್ ಆಫೀಸ್`ಗಳನ್ನ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ (POPSK) ಗಳಾಗಿ ಮಾರ್ಪಾಡು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ಈ ಪಿಓಪಿಎಸ್`ಕೆಗೆ ಅನುಮತಿ ನೀಡಿದ್ದು, ಆಯ್ದ ಅಂಚೆ ಕಚೇರಿಗಳಲ್ಲಿ ತಾಂತ್ರಿಕತೆ ಉನ್ನತೀಕರಣ ನಡೆಯುತ್ತಿದೆ.