ಭೃಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಮಹಾರಾಷ್ಟ್ರ ಕಂದಾಯ ಸಚಿವ ಏಕನಾಥ್ ಖಾಡ್ಸೆ ತತ್‌ಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ಮೇಲಿರುವ ಆರೋಪಗಳ ವಿರುದ್ಧ ತನಿಖೆಯಾಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
"ಖಾಡ್ಸೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಅವರ ವಿರುದ್ಧದ ಎಲ್ಲ ಆರೋಪಗಳ ತನಿಖೆಯಾಗಬೇಕು", ಎಂದು ಆಪ್ ನಾಯಕ ಟ್ವೀಟ್ ಮಾಡಿದ್ದಾರೆ.
ಖಾಡ್ಸೆ, ಕರಾಚಿಯಲ್ಲಿ ಅವಿತಿದ್ದಾನೆಂದು ಹೇಳಲಾಗುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ನಂಟು ಹೊಂದಿರುವ ಮತ್ತು ಸರಕಾರಿ ಜಾಗವನ್ನು ಕಬಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಹಸ್ತಾಂತರಿಸಿದ್ದಾರೆ. ಅವರು ಪ್ರಧಾನಿ ಮೋದಿಯವರನ್ನು ಸಹ ಭೇಟಿಯಾಗುವ ಸಾಧ್ಯತೆ ಇದೆ.
ಖಾಡ್ಸೆ ವಿರುದ್ಧ ತನಿಖೆಗೆ ಮತ್ತು ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಅಪ್ ಮಾಜಿ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಸಿಎಂ ನಿವಾಸದ ಮುಂದೆ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.