ನಾನು ಜಯಲಲಿತಾ ಪುತ್ರ, ಅಮ್ಮನ ಆಸ್ತಿ ನನಗೇ ಸೇರಬೇಕೆಂದು ಮದ್ರಾಸ್ ಹೈಕೋರ್ಟ್ ಮುಂದೆ ಹೋಗಿದ್ದ ಕೃಷ್ಣಮೂರ್ತಿ ವಿರುದ್ಧ ಕ್ರಮ ಜರುಗಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಕೃಷ್ಣಮೂರ್ತಿ ಹೈಕೋರ್ಟ್`ಗೆ ನೀಡಿದ್ದ ದಾಖಲೆಗಳು ನಕಲಿ ಎಂದು ಪೊಲೀಸ್ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದ್ದು, ನ್ಯಾಯಾಲಯವನ್ನ ತಪ್ಪು ದಾರಿಗೆ ಎಳೆಯಲು ಯತ್ನಿಸಿದ ಕೃಷ್ಣಮೂರ್ತಿ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ.
ಈತ ನ್ಯಾಯಾಲಯಕ್ಕೆ ಮಾತ್ರ ಮೋಸ ಮಾಡಿಲ್ಲ, ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದಾನೆ. ಹೀಗಾಗಿ, ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಿ ಎಂದು ಪೊಲೀಸರಿಗೆ ನ್ಯಾಯಮೂರ್ತಿ ಮಹದೇವನ್ ಆದೇಶಿಸಿದ್ದಾರೆ.
ಕೆಲ ವಾರದ ಹಿಂದಷ್ಟೇ ನ್ಯಾಯಾಲಯದ ಮುಂದೆ ಬಂದಿದ್ದ ಕೃಷ್ಣಮೂರ್ತಿಗೆ ಎಲ್ಲ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸುವಂತೆ ಕೋರ್ಟ್ ಆದೇಶಿಸಿತ್ತು. ಇದೀಗ, ದಾಖಲೆಗಳ ಸತ್ಯಾ ಸತ್ಯತೆ ಬಗ್ಗೆ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್`ಗೆ ವರದಿ ಸಲ್ಲಿಸಿದ್ದರು.
ಶೋಭನ್ ಬಾಬು ನನ್ನ ತಂದೆ ಮತ್ತು ಜಯಲಲಿತಾ ನನ್ನ ತಾಯಿ ಎಂದು ಹೇಳಿದ್ದ ಕೃಷ್ಣಮೂರ್ತಿ ನೀಡಿದ್ದ ಫೋಟೋ, ದತ್ತು ನೀಡಲು ಎಂಜಿಆರ್ ಮಾಡಿದ್ದಾರೆನಲಾದ ಸಹಿಯ ದಾಖಲೆ ಇವೇ ಮುಂತಾದ ದಾಖಲೆಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ಕೃಷ್ಣಮೂರ್ತಿ ಸಲ್ಲಿಸಿರುವ ಎಲ್ಲ ದಾಖಲೆಗಳು ನಕಲಿ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.