ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ವಾಶ್ ಔಟ್ ಆಗುವುದರತ್ತ ಸಾಗಿದೆ. ಲೋಕಸಭೆಯಲ್ಲಿ ನೋಟ್ ನಿಷೇಧ ಗದ್ದಲ ಇಂದು ಕೂಡ ಮುಂದುವರೆದಿದ್ದು ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಲಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಆರಂಭವಾದ ಕೆಲವೇ ಕ್ಷಣಗಳಲ್ಲಿ ಕಲಾಪ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ ಕಂಡಿತ್ತು. ಬಳಿಕ ಮತ್ತೆ ಸೇರಿದ ಲೋಕಸಭೆಯಲ್ಲಿ ಕೋಲಾಹಲ ಮುಂದುವರೆಯಿತು.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಚಕಮಕಿ ನಡೆದು ನಾವು ಯಾವುದೇ ನಿಯಮದಡಿ ಚರ್ಚಿಸಲು ಸಿದ್ಧ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಕೇಂದ್ರ ಸರ್ಕಾರ ಕೂಡ ಚರ್ಚಿಸಲು ಸಿದ್ಧವಿದೆ. ನಾವೇನು ಚರ್ಚೆಗೆ ಹೆದರಿ ಓಡಿ ಹೋಗುತ್ತಿಲ್ಲ. ಓಡುತ್ತಿರುವವರು ಕಾಂಗ್ರೆಸ್ ಮತ್ತು ಅವರ ನಾಯಕ ರಾಹುಲ್ ಗಾಂಧಿ ಎಂದರು.
ವಿವಿಐಪಿ ಕಾಫ್ಟರ್ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ. ಅದರ ಬಗ್ಗೆ ಕೂಡ ಸದನದಲ್ಲಿ ಚರ್ಚೆಯಾಗಬೇಕು ಎಂದು ಅವರು ಉತ್ತರಿಸಿದರು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿತು. ಕೈ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸಿದರು.ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಡಳಿತಾರೂಢ ಪಕ್ಷವೇ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಆರೋಪಿಸಿದರು.
ಸಂಸತ್ ಗದ್ದಲಕ್ಕೆ ತೀವ್ರ ಅಸಮಧಾನ ವ್ಯಕ್ತ ಪಡಿಸಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ತಮಗೆ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ. ಕಳೆದ ವಾರ ಸಹ ಅವರು ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಬಗ್ಗೆ ಕೋಪವನ್ನು ಹೊರಹಾಕಿದ್ದರು.
ನಾಲ್ಕು ದಿನಗಳ ಸುದೀರ್ಘ ರಜೆಯ ಬಳಿಕ ಬುಧವಾರ ಆರಂಭಗೊಂಡ ಸಂಸತ್ ಕಲಾಪವನ್ನು ನೋಟು ನಿಷೇಧ ಮತ್ತು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ಮೇಲೆ ಬಂದಿರುವ ಆರೋಪ ನುಂಗಿ ಹಾಕಿತ್ತು. ಹೀಗಾಗಿ ನಿನ್ನೆ ಕಲಾಪವನ್ನು ಇಂದಿಗೆ ಮುಂಡೂಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.