ಬೈಕ್ಗೆ ಪೊಲೀಸರು ದಂಡ ಹಾಕಿದ ಸಿಟ್ಟಿನಲ್ಲಿ ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯ ಹರ್ದಾಸ್ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೈನ್ಮ್ಯಾನ್ ಗೆ ದಂಡ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಲೈನ್ ಮ್ಯಾನ್ ವಿದ್ಯುತ್ ಪೂರೈಕೆ ನಿಲ್ಲಿಸಿದ್ದಾನೆ. ಇದರಿಂದ ಪೊಲೀಸರು ರಾತ್ರಿಯೀಡಿ ಕತ್ತಲಲ್ಲಿ ಕಳೆಯುವಂತಾಗಿದೆ.
ಶನಿವಾರ ರಾತ್ರಿಯೇ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಬಗ್ಗೆ ವಿದ್ಯುತ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ.
ಇನ್ಸ್ಪೆಕ್ಟರ್ ಮೋದಿ ಸಿಂಗ್ ಅವರು ವಾಹನ ತಪಾಸಣೆ ಮಾಡುತ್ತಿದ್ದಾಗ ಲೈನ್ಮ್ಯಾನ್ ಭಗವಾನ್ ಸ್ವರೂಪ್ ಎಂಬವರ ಬೈಕ್ ನಿಲ್ಲಿಸಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದರು. ಸ್ವರೂಪ್ ತನ್ನ ಬಳಿ ಕಾಗದಪತ್ರಗಳಿಲ್ಲ ಮತ್ತು ಮನೆಗೆ ಹೋಗಿ ಅವುಗಳನ್ನು ತರಬೇಕು ಎಂದಿದ್ದಾರೆ. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳ ಇನ್ಸ್ಪೆಕ್ಟರ್ ರೂ 500 ದಂಡವನ್ನು ಆತನಿಗೆ ವಿಧಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಈ ಘಟನೆಯಿಂದ ಸ್ವರೂಪ್ ಕೋಪಗೊಂಡಿದ್ದು, ವಿದ್ಯುತ್ ಇಲಾಖೆಯ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಪೊಲೀಸ್ ಠಾಣೆಯ ವಿದ್ಯುತ್ ಮೀಟರ್ ನಲ್ಲಿ ಕೊರತೆಯಿದೆ, ಆದ್ದರಿಂದ ವಿದ್ಯುತ್ ಸಂಪರ್ಕ ಕಾನೂನುಬಾಹಿರವಾಗಿದೆ ಎಂದು ಸ್ವರೂಪ್ ತಿಳಿಸಿರುವುದಾಗಿ ವರದಿಯಾಗಿದೆ.