ನವದೆಹಲಿ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಈ ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ನಿಜವಾಗಿತ್ತು.
ಮಹಿಳೆಯೊಬ್ಬಳು ತನ್ನ ವಿಚ್ಛೇದಿತ ಪತಿ ಕೋರ್ಟ್ ನಲ್ಲಿ ನಿರ್ಧಾರವಾದಂತೆ ಹಣಕಾಸಿನ ನೆರವು ನೀಡಿಲ್ಲ. ಇದರಿಂದಾಗಿ ಎಲ್ಎಲ್ಎಲ್ ಬಿ ಮೂರನೇ ಸೆಮಿಸ್ಟರ್ ನಲ್ಲಿರುವ ಓರ್ವ ಪುತ್ರಿ ಹಾಗೂ ಇನ್ನೊಬ್ಬ ಪುತ್ರಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ದೆಹಲಿ ಹೈಕೋರ್ಟ್ ನಲ್ಲಿ ದೂರು ಸಲ್ಲಿಸುತ್ತಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತಾಗಿರುವ ವಿಚಾರ ತಿಳಿದ ಅಲ್ಲಿನ ವಕೀಲರ ಮನ ಮರುಗಿದೆ.
ಹೀಗಾಗಿ ತಕ್ಷಣವೇ ಕೋರ್ಟ್ ನಲ್ಲಿದ್ದ ಎಲ್ಲಾ ವಕೀಲರು ಸೇರಿ ಸುಮಾರು 1 ಲಕ್ಷ ರೂ.ಗಳಿಗೂ ಹೆಚ್ಚು ಹಣ ಸಂಗ್ರಹಿಸಿಕೊಟ್ಟು ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ವಕೀಲರ ಈ ಉದಾರತೆಯನ್ನು ಕೊಂಡಾಡಿರುವ ನ್ಯಾಯಾಧೀಶರು ಇಂತಹ ಕೆಲಸ ಮತ್ತಷ್ಟು ನಡೆಯಬೇಕು ಎಂದಿದ್ದಾರೆ.