ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರದಲ್ಲಿ ಮೈತ್ರಿಪಕ್ಷವಾಗಿರುವ ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ಸುಶೀಲ್ ಕುಮಾರ್, ಲಾಲು ಯಾದವ್ ಬಿಹಾರ್‌ನ ರಾಬರ್ಟ್ ವಾದ್ರಾ ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹರಿಯಾಣಾದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ನಡೆಸಿದ ಭೂ ಹಗರಣಗಳು, ಭ್ರಷ್ಟಾಚಾರ ಮಾಡಿದಂತೆ, ಲಾಲು ಯಾದವ್ ಕೂಡಾ ನೂರಾರು ಕೋಟಿ ರೂಪಾಯಿಗಳ ಬೇನಾಮಿ ಆಸ್ತಿ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಹಾರದ ಬಿಜೆಪಿಯ ಹಿರಿಯ ಮುಖಂಡರಾದ ಸುಶೀಲ್ ಮೋದಿ ಪತ್ರಿಕಾಗೋಷ್ಠಿ ನಡೆಸಿ ಯಾದವ್ ಕುಟುಂಬವು ಶೆಲ್ ಕಂಪನಿಗಳ ಮೂಲಕ 1,000 ಕೋಟಿ ರೂ ಬೇನಾಮಿ ಆಸ್ತಿ ಮಾಡಿದ್ದು, ಬೇನಾಮಿ ಆಸ್ತಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ತನಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ 90 ದಿನಗಳಿಂದ ಲಾಲು ಯಾದವ್ ಅವರ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದೇವೆ. ಸಿಎಂ ನಿತೀಶ್ ಕುಮಾರ್‌ಗೆ ನಾಲ್ಕು ಪತ್ರಗಳನ್ನು ಬರೆದಿದ್ದೇನೆ. ಆದರೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ವಿಪಕ್ಷಗಳ ಪತ್ರಗಳನ್ನು ಓದದಿರುವ ಇವರೆಂಥಾ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ನಿತೀಶ್ ಕುಮಾರ್ ಬೆಂಬಲ ನೀಡಿದ್ದರಿಂದ ಮಹಾಮೈತ್ರಿಕೂಟ ವಿಭಜನೆಯಾಗಲಿದೆ ಎನ್ನಲಾಗಿತ್ತು. ಆದರೆ, ಮೈತ್ರಿಕೂಟದ ಮುಖಂಡರು ಮೈತ್ರಿಯಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.