ಕಾಬೂಲ್ :ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೆಳಗ್ಗೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಇತರ ಸುಮಾರು 42 ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಕಾಬೂಲ್‌ನಲ್ಲಿ ಉಗ್ರರು ಈ ದಾಳಿ ನಡೆದಿದ್ದು ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಆತ್ಮಾಹುತಿ ಬಾಂಬ್
ದಾಳಿಯನ್ನು ದೃಢೀಕರಿಸಿರುವ ಒಳಾಡಳಿತ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ಹೇಳಿದ್ದಾರೆ. ಸರಕಾರದ ಉಪ ಕಾರ್ಯಕಾರಿ ಮುಖ್ಯಸ್ಥ ಮೊಹಮ್ಮದ್ ಮೊಹಾಕಿಕ್ ಅವರ ನಿವಾಸದ ಬಳಿ ಈ ದಾಳಿ ನಡೆದಿದೆ. ಶಿಯಾ ಹಜಾರಾ ಸಮುದಾಯದವರ ಪ್ರಾಬಲ್ಯವಿರುವ ಪ್ರದೇಶವು ಇದಾಗಿದೆ ಎಂದು ತಿಳಿದುಬಂದಿದೆ.
ಎರಡು ವಾರಗಳ ಹಿಂದೆ ನಾಲ್ವರನ್ನು ಬಲಿತೆಗೆದುಕೊಂಡ ಕಾಬೂಲ್‌ನಲ್ಲಿನ ಮಸೀದಿ ಮೇಲಿನ ಬಾಂಬ್ ದಾಳಿಯನ್ನು ತಾನು ಎಸಗಿರುವುದಾಗಿ ಇಸ್ಲಾಮಿಕ್ ಉಗ್ರ ಸಂಘಟನೆ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ.