ವಾಷಿಂಗ್ಟನ್ ರಾಜ್ಯದಿಂದ ಕಣಕ್ಕಿಳಿದಿದ್ದ ಭಾರತೀಯ ಮೂಲದ ಜಯಪಾಲ್ ಜಯಭೇರಿ ಬಾರಿಸಿದ್ದು ಯುಎಸ್ ಹೌಸ್‌ಗೆ ಆಯ್ಕೆಯಾದ ಪ್ರಥಮ ಇಂಡೋ- ಅಮೇರಿಕನ್ ಮಹಿಳೆ ಎನಿಸಿದ್ದಾರೆ.
51 ವರ್ಷದ ಜಯಪಾಲ್ 57% ಮತಗಳನ್ನು ಗಳಿಸಿ ತಮ್ಮ ಪ್ರತಿಸ್ಪರ್ಧಿ ಬ್ರಾಡಿ ವಾಕಿನ್ಶಾಗೆ ಮಣ್ಣುಮುಕ್ಕಿಸಿದರು. ಸೋಲು ಕಂಡ ಬ್ರಾಡಿ ಗಳಿಸಿದ್ದು 43% ಮತಗಳನ್ನು.
ಭಾರತ ಸಂಜಾತೆ ಜಯಪಾಲ್ ವಾಷಿಂಗ್ಟನ್ ರಾಜ್ಯ ಸೆನೆಟ್‌ನಲ್ಲಿ ತನ್ನ ಪ್ರಗತಿಪರ ಕಾರ್ಯಸೂಚಿಯ ಮೂಲಕ ಜನರಿಂದ ಗುರುತಿಸಲ್ಪಟ್ಟಿದ್ದಾರೆ.
ಇಲಿನಾಯ್ಸ್‌ನಿಂದ ಚುನಾವಣಾ ಕಣಕ್ಕಿಳಿದಿದ್ದ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ (43)ಅವರು ಸಹ ಗೆಲುವಿನ ನಗೆ ಬೀರಿದ್ದಾರೆ. ಅವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ.
ಅಮೇರಿಕಾ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ರಾಜಾ ರಿಪಬ್ಲಿಕ್ ಪತ್ರದ ಪೀಟರ್ ಡಿಕಿಯಾನ್ನಿ ವಿರುದ್ಧ ಕಣಕ್ಕಿಳಿದಿದ್ದರು.
ಮೂಲತಃ ತಮಿಳುನಾಡಿನ ಚೆನ್ನೈನವರಾದ ಇವರು ಅಮೇರಿಕದಲ್ಲೇ ನೆಲೆಯೂರಿದ್ದಾರೆ. ಬರಾಕ್ ಒಬಾಬಾ ಗೆಲುವಿನಲ್ಲೂ (2008) ಅವರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮನ್ನು ಗೆಲ್ಲಿಸಿದವರಿಗೆ ಕೃಷ್ಣಮೂರ್ತಿ ಟ್ವಿಟರ್ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ.
ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಎಂಜಿನಿಯರಿಂಗ್, ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಆನರ್ಸ್ ಪದವಿಯನ್ನು ಪಡೆದಿದ್ದಾರೆ.