ಅನಾರೋಗ್ಯಕ್ಕೀಡಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ, ಜೆ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ಹರಿದು ಬಂದಿದೆ.
ಅವರು ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಮೂಲಗಳು ಇದನ್ನು ಖಚಿತ ಪಡಿಸಿವೆ.
ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಲಲಿತಾ ಸೆಪ್ಟೆಂಬರ್ 22ರಂದು ನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಕಿಡ್ನಿ ಸಮಸ್ಯೆ ಮತ್ತು ಅಧಿಕ ಮಧುಮೇಹದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಅವರು ವಿದೇಶಕ್ಕೆ ಹೋಗುತ್ತಿರುವ ಸುದ್ದಿ ಕೇವಲ ವದಂತಿ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟ ಪಡಿಸಿದ್ದರು. ಮತ್ತೀಗ ಅವರ ಸ್ಥಿತಿ ಚಿಂತಾಜನಕ ಎಂಬ ಸುದ್ದಿ ಹರಿದು ಬಂದಿದೆ.
ಈ ಹಿಂದೆ ಕೂಡ ಜಯಾ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿರುವುದು ಇದೇ ಮೊದಲು.
ಕಳೆದ ಕೆಲ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬಂದು ತಮ್ಮ ಸಚಿವಾಲಯದಿಂದ ಕಾರ್ಯ ನಿರ್ವಹಿಸದೇ ಮನೆಯಿಂದಲೇ ಅವರು ರಾಜ್ಯಭಾರವನ್ನು ಸಂಭಾಳಿಸುತ್ತಿದ್ದರು. ಈ ಕುರಿತು ವಿರೋಧ ಪಕ್ಷ ಡಿಎಂಕೆ ಸದಾ ಪ್ರಶ್ನೆಯನ್ನು ಎತ್ತುತ್ತಲೇ ಇತ್ತು. ಸಿಎಂ ಆರೋಗ್ಯ ಹೇಗಿದೆ ಎಂಬ ಮಾಹಿತಿ ನೀಡಿ ಎಂಬ ವಿರೋಧ ಪಕ್ಷ ಒತ್ತಾಯಿಸುತ್ತಿದ್ದರೂ ಜಯಲಲಿತಾ ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ