Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಲ್ಲಿಕಟ್ಟು ವಿವಾದ: ಸುಗ್ರಿವಾಜ್ಞೆಗೆ ಅಸ್ತು ಎಂದ ಬಳಿಕವೂ ಮುಂದುವರೆದ ಪ್ರತಿಭಟನೆ

ಜಲ್ಲಿಕಟ್ಟು ವಿವಾದ: ಸುಗ್ರಿವಾಜ್ಞೆಗೆ ಅಸ್ತು ಎಂದ ಬಳಿಕವೂ ಮುಂದುವರೆದ ಪ್ರತಿಭಟನೆ
ಚೆನ್ನೈ , ಶನಿವಾರ, 21 ಜನವರಿ 2017 (13:05 IST)
ತಮಿಳುನಾಡು ಸರ್ಕಾರ ಕಳುಹಿಸಿದ್ದ ಸುಗ್ರಿವಾಜ್ಞೆ ಕರಡಿಗೆ ಕೇಂದ್ರ ಒಪ್ಪಿಗೆ ಸೂಚಿಸಿದ ಬಳಿಕವೂ ರಾಜ್ಯದಲ್ಲಿ ಪ್ರತಿಭಟನೆ ಮುಂದುವರೆದಿದೆ.
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋರ್ಟ್ ತಡೆ ಒಡ್ಡಿರುವುದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಹುದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನೈನ ಹೃದಯಭಾಗದಲ್ಲಿರುವ ಮರೀನಾ ಬೀಚ್‌ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಕ್ರಾಂತಿಯ ರೂಪ ತಳೆದಿದ್ದು ಎಲ್ಲ ರಂಗದವರು ಇವರಿಗೆ ಸಾಥ್ ನೀಡಿದ್ದಾರೆ. ನಿನ್ನೆ ರಾಜ್ಯಾದ್ಯಂತ ಬಂದ್ ಸಹ ಕೈಗೊಳ್ಳಲಾಗಿತ್ತು. 
 
ಜನರ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರಧಾನಿಯನ್ನು ಭೇಟಿಯಾಗಿ ಸುಗ್ರಿವಾಜ್ಞೆ ಹೊರಡಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಪ್ರಧಾನಿ ಕೈ ಚೆಲ್ಲಿದ್ದರು. ಬಳಿಕ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಸಲಹೆಯಂತೆ ರಾಜ್ಯ ಸರ್ಕಾರವೇ ಸುಗ್ರಿವಾಜ್ಞೆ ತಯಾರಿಸಿ ಕೇಂದ್ರ ಗೃಹಖಾತೆಗೆ ಅದರ ಕರಡನ್ನು ಕಳುಹಿಸಿತ್ತು. ಜನರ ಹೋರಾಟಕ್ಕೆ ಮಣಿದಿದ್ದ ಕೇಂದ್ರಕ್ಕೆ ಸುಗ್ರಿವಾಜ್ಞೆ ಹೊರಡಿಸುವುದೊಂದೇ ದಾರಿ ಎಂಬುದು ಮನದಟ್ಟಾದ ಮೇಲೆ ಜಲ್ಲಿಕಟ್ಟು ಕುರಿತಾದ ಅಂತಿಮ ತೀರ್ಪನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಸುಗ್ರಿವಾಜ್ಞೆ ಹೊರಡಿಸಿದರೆ ನ್ಯಾಯಾಂಗ ನಿಂದನೆಯಾಗಬಾರದೆಂಬ ಹಿನ್ನೆಲೆಯಲ್ಲಿ ಕೇಂದ್ರ ಈ ಅಪರೂಪದ ಮನವಿಯನ್ನು ಮಾಡಿಕೊಂಡಿತ್ತು. 
 
ಸುಪ್ರೀಂ ಈ ಮನವಿಗೆ ಒಪ್ಪಿದ ಬಳಿಕ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸುಗ್ರಿವಾಜ್ಞೆ ಕರಡಿನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿ ಕಾನೂನು ಸಚಿವಾಲಯದ ಅನುಮೋದನೆ ನೀಡಲಾಗಿತ್ತು. ಬಳಿಕ ಈ ಪ್ರತಿಯನ್ನು ರಾಷ್ಟ್ರಪತಿಗೆ ಕಳುಹಿಸಲಾಗಿದೆ. ಇದನ್ನು  ಜಲ್ಲಿಕಟ್ಟುಗಾಗಿ ತಮಿಳುನಾಡಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಜಯ ಸಿಕ್ಕಂತಾಗಿದೆ ಎಂದೇ ಹೇಳಲಾಗಿತ್ತು.
 
ಆದರೆ ಕೇಂದ್ರದಿಂದ ಹಸಿರು ನಿಶಾನೆ ದೊರೆತ ಬಳಿಕವೂ ತಮಿಳುನಾಡಿನ ಜನತೆ ಪ್ರತಿಭಟನೆಯನ್ನು ನಿಲ್ಲಿಸಿಲ್ಲ.  ರಾಜಕೀಯ ಪಕ್ಷಗಳು ಸಹ ಇವರಿಗೆ ಸಾಥ್ ನೀಡಿದ್ದು ಡಿಎಂಕೆ ಪಕ್ಷ ಒಂದು ದಿನದ ಕಾಲ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಂಜನಗೂಡು ಉಪಚುನಾವಣೆಗೆ ಮಹದೇವಪ್ಪರಿಂದ ಹಣದ ಹೊಳೆ: ಸಾ.ರಾ.ಮಹೇಶ್