ಗೋವಾದ ಕಂಪಾಲ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮುಂದಿನ ವರ್ಷ ಗೋವಾ ರಾಜ್ಯದ ವಿಧಾನಸಭೆಯಲ್ಲಿ ಆಪ್ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಗೋವಾ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಆಪ್ ಪಕ್ಷವೇ ಹೊಸ ಆಶಾಕಿರಣವಾಗಿದೆ. ನಾವು ಬಿಜೆಪಿಯ ಎ ಅಥವಾ ಬಿ ತಂಡವಲ್ಲ. ನಾವು ಕ್ರಿಮಿನಲ್‌ಗಳು, ಭ್ರಷ್ಟಾಚಾರ ಮತ್ತು ಕೋಮುವಾದಿಯನ್ನು ಬಗ್ಗು ಬಡಿಯುವ ಸಿ ತಂಡವಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂಬಾನಿ, ಶೀಲಾ ದೀಕ್ಷಿತ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ದೆಹಲಿಯಲ್ಲಿ ಕನಿಷ್ಠ ಶೇ.70 ರಷ್ಟು ಭ್ರಷ್ಟಾಚಾರದಲ್ಲಿ ಇಳಿಕೆಯಾಗಿದೆ ಎಂದರು.
ದೇಶದಲ್ಲಿಯೇ ಕಡಿಮೆ ವಿದ್ಯುತ್ ದರ ವಿಧಿಸುತ್ತಿರುವ ರಾಜ್ಯಗಳಲ್ಲಿ ಎರಡನೇಯದಾಗಿದೆ. 1400 ಕೋಟಿ ರೂಪಾಯಿಗಳ ಅನುದಾನದಿಂದಾಗಿ 36 ಲಕ್ಷ ಕುಟುಂಬಗಳು ವಿದ್ಯುತ್‌ನ ಸದುಪಯೋಗಪಡಿಸಿಕೊಳ್ಳುತ್ತಿರುವುದು ಸರಕಾರದ ಸಾಧನೆಯಾಗಿದೆ ಎಂದರು.
ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಪರಿಕ್ಕರ್ ಗೋವಾ ಜನತೆಯನ್ನು ಮೂರ್ಖರನ್ನಾಗಿಸಿದ್ದಾರೆ. ಪರಿಕ್ಕರ್ ಚುನಾವಣೆಯಲ್ಲಿ ನೀಡಿದ ಐದು ಭರವಸೆಗಳನ್ನು ಈಡೇರಿಸಿದ ಬಗ್ಗೆ ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.