ನವದೆಹಲಿ (ಅ 10) : "ಜಾರಿ ನಿರ್ದೇಶನಾಲಯ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ ಎಂಬ ಸುದ್ದಿ ನಿಜವಲ್ಲ. ಆಸ್ತಿ ಸಂಪಾದನೆ ಕುರಿತು ವಿಚಾರಣೆಗೆ ಕರೆದಿದ್ದರು, ಇದೀಗ ವಿಚಾರಣೆ ಮುಗಿಸಿ ತೆರಳಿದ್ದೇನೆ.
ನನ್ನನ್ನು ಬಂಧಿಸಿಲ್ಲ" ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಐಎಂಎ ಹಗರಣ ಬೆಳಕಿಗೆ ಬಂದಾಗಿನಿಂದಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಆಸ್ತಿ ಗಳಿಕೆ, ಅಕ್ರಮ ಆಸ್ತಿ ಮತ್ತು ಹಣದ ವ್ಯವಹಾರದ ಬಗ್ಗೆ ವಿಚಾರಣೆ ನಡೆಸುತ್ತಲೇ ಇದ್ದಾರೆ. ಇದೀಗ ಇಡಿ ಅಧಿಕಾರಿಗಳು ಕಳೆದ 3 ದಿನಗಳಿಂದ ಜಮೀರ್ ಅಹಮದ್ ಗೆ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿದಿನವೂ ಇಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಆದರೆ, ಈ ಬಗ್ಗೆ ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಜಮೀರ್ ಅಹ್ಮದ್, "ಇಡಿ ಬಂಧನ ಅನ್ನೊದು ನಿಜವಲ್ಲ. ಒಂದು ಬಾರಿ ಮಾತ್ರ ವಿಚಾರಣೆಗೆ ಕರೆದಿದ್ದರು. ಇಡಿ ಅಧಿಕಾರಿಗಳು ಕೆಲ ಮಾಹಿತಿ ಕೇಳಿದ್ದರು. ಈಗಾಗಲೇ ಇಡಿ ಕೇಳಿರುವ ಎಲ್ಲಾ ಮಾಹಿತಿಯನ್ನೂ ಕೊಟ್ಟಿದ್ದೇನೆ. ನನ್ನನ್ನು ಅರ್ಧ ಗಂಟೆ ಮಾತ್ರ ಮಾತನಾಡಿಸಿದರು. ಅರೆಸ್ಟ್ ಮಾಡುವುದಾಗಿದ್ದರೆ ಅರ್ಧ ಗಂಟೆಯಲ್ಲೆ ವಿಚಾರಣೆ ಮುಗಿಯುತ್ತಿರಲಿಲ್ಲ. ಇಡಿ ಬಂಧನ ಎಂಬುದು ಸುಳ್ಳು ಸುದ್ದಿ. ಮತ್ತೆ ವಿಚಾರಣೆಗೆ ಬರುವಂತೆ ನನ್ನನ್ನು ಕರೆದಿಲ್ಲ. ಸೋಮವಾರ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ" ಎಂದು ತಿಳಿಸಿದ್ದಾರೆ.